

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತದ ಡಿಜಿಟಲ್ ವ್ಯವಸ್ಥೆಗೆ ಇಡೀ ಜಗತ್ತೇ ಬೆರಗಾಗಿದೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿದರು.
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಎನ್.ಎಂ.ತಡಸ, ಬೆಂಡಿಗೇರಿ, ಮಣಕಟ್ಟಿ ಗ್ರಾಮಗಳಲ್ಲಿ ಶನಿವಾರದಂದು ಪ್ರಚಾರ ಸಭೆ ಉದ್ದೇಶಿಸಿ, ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಡಿಜಿಟಲ್ ಪಾವತಿಯನ್ನು ಪರಿಚಯಿಸಿ, ಜಗತ್ತೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು ಎಂದು ಬಣ್ಣಿಸಿದರು.
ಭಾರತವನ್ನು ಸಂಪೂರ್ಣ ಬಡತನಮುಕ್ತಗೊಳಿಸುವುದು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದೆ. ಭಾರತದಲ್ಲಿ ಬಡತನ ತೊಲಗಿಸುವ ಅವರ ಕಾರ್ಯವನ್ನು ಸಾಕಾರಗೊಳಿಸಲು ನಾವು ಹೆಗಲು ಕೊಟ್ಟು ನಿಲ್ಲಬೇಕಿದೆ. ಇದಕ್ಕಾಗಿ ಬಿಜೆಪಿಯನ್ನು ಮತ್ತೆ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಬ್ಬರದ ಪ್ರಚಾರ: ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಕ್ಷೇತ್ರದ ಹಲವಾರು ಹಳ್ಳಿಗಳಲ್ಲಿ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೂ ರೋಡ್ ಶೋ ಮೂಲಕ ಮತಯಾಚನೆಯಲ್ಲಿ ತೊಡಗಿದ್ದರು. ಪಕ್ಷದ ಪ್ರಮುಖ ಮುಖಂಡರು ಸಾಥ್ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಿಜೆಪಿ ಪ್ರಮುಖರಾದ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡೀಗೌಡರ, ಶಶಿಧರ ಎಲ್ಲಿಗಾರ, ತಿಪ್ಪಣ್ಣ ಸತನ್ನವರು, ಪ್ರಸಾದ ಸುರಗಿಮಠ, ರವಿ ಕುಡೊಕ್ಕಲಿಗರ, ಬಸವರಾಜ ನಾರಾಯಣಪುರ, ಶ್ರೀಕಾಂತ ಬುಲ್ಲಕ್ನವ್ರು, ದೇವಣ್ಣ ಛಕ್ಲಬ್ಬಿ, ಶಂಕರ ಪೊಲೀಸ್ ಗೌಡ್ರು, ಹೊನ್ನಪ್ಪ ಹೂಗಾರ, ಸೋಮಯ್ಯ ಗೌರಿಮಠ ಹಾಗೂ ಪಕ್ಷದ ಪ್ರಮುಖರು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.