ಮೌಢ್ಯ ತೊರೆದರೆ ಜಗತ್ತು ಸುಂದರ

BRM Nithya kalyana 08 (1)
Published on

ಭರಮಸಾಗರ: ಮೊಬೈಲ್, ಟಿವಿ, ಧಾರವಾಹಿಗಳ ಅಬ್ಬರದ ಪರಿಣಾಮ ಮನಸ್ಸುಗಳು ಕಲುಷಿತಗೊಳ್ಳುತ್ತಿವೆ. ಸಂಬಂಧಗಳು ಕಣ್ಮರೆ ಆಗುತ್ತಿವೆ. ಈ ಸಂದರ್ಭ ಮಾನವೀಯ ಗುಣ ಜನರಲ್ಲಿ ಬಿತ್ತುವ ಕಾರ್ಯ ಮುರುಘಾಮಠದ ಆಶಯ, ಗುರಿ ಆಗಿದೆ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಬಸವೇಶ್ವರ ಸಮುದಾಯ ಭವನದ ಆವರಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ನಿತ್ಯಕಲ್ಯಾಣ, ಮನೆ ಮನೆ ಚಿಂತನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿತ್ಯ ಕಲ್ಯಾಣ ಜ್ಞಾನವೆಂಬ ಬಂಗಾರವನ್ನು ನೀಡುವುದಾಗಿದೆ. ಈ ಜ್ಞಾನವೆಂಬ ಆಭರಣ ಧರಿಸಿದರೆ ಅವರು ನಿಜವಾದ ಒಡೆಯರಾಗುತ್ತಾರೆ,ಜಗತ್ತಿನಲ್ಲೆ ಬೆಲೆ ಸಿಗುತ್ತದೆ ಎಂದರು.

ವಿಚಾರ ಶಕ್ತಿ, ಜ್ಞಾನದ ಶಕ್ತಿ ನಮ್ಮ ಸಂಪತ್ತಾಗಬೇಕು, ದೇವರು ಕೊಟ್ಟಿರುವ ಶರೀರದಲ್ಲಿ ಜ್ಞಾನದ ದೀಪವನ್ನು ಹಚ್ಚಬೇಕು. ಇದರಿಂದ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಶರಣರಾಗುತ್ತಾರೆ.

ಒಳ್ಳೆಯವರಾಗುವ ಮೂಲಕ ವೈಚಾರಿಕತೆಯನ್ನು ಕಂಡುಕೊಂಡು, ದೇವರಾಗಬೇಕು. ಮೂಢನಂಬಿಕೆಗಳನ್ನು ತೊರೆದಾಗ ಜಗತ್ತು ಸ್ವರ್ಗವಾಗುತ್ತದೆ ಎಂದರು.

ಕಂದಾಚಾರಗಳನ್ನು ಆಚರಣೆ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಡಿ. ಮನುಷ್ಯ ವಿಚಾರ,ಚಿಂತನಾ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಲೌಕಿಕ ಚಿಂತೆ ಬಿಟ್ಟು ಪರಮಾತ್ಮನ ಚಿಂತೆ ಮಾಡಿ ನಿಶ್ಚಿಂತ್ಯರಾಗಿ ನಿತ್ಯಮುಕ್ತರಾಗಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸ ನೀಡಿದ ಸಾಹಿತಿ ನಿರಂಜನ ದೇವರ ಮನೆ, ಬದುಕಿನ ಮೌಲ್ಯಗಳನ್ನು ಚಿಂತನ ದೃಷ್ಠಿ ಮೂಲಕ ಸಾಗಬೇಕು. ಇಷ್ಟಲಿಂಗದಲ್ಲಿ ಮಾತ್ರ ದೃಷ್ಟಿಯನ್ನಿಟ್ಟುಕೊಂಡು ಅಂದುಕೊಂಡಂತೆ ಜೀವಿಸುವ ಪದ್ಧತಿಯೇ ಒಳ್ಳೆಯ ಚಿಂತನೆ ಎಂದರು.

ಕೋಗುಂಡೆ ಮಂಜುನಾಥ್ ಮಾತನಾಡಿ, ಅನ್ಯ, ಅನಗತ್ಯ ವಿಚಾರಗಳಿಂದ ದೂರವಿದ್ದು, ಉತ್ತಮ ಚಿಂತನೆಗಳ ಮೂಲಕ ನೆಮ್ಮದಿ ಜೀವನ ಕಂಡುಕೊಳ್ಳಬಹುದು ಎಂದು ಹೇಳಿದರು.

ಮುಖಂಡ ಷಮೀಂ ಪಾಷಾ ಮಾತನಾಡಿ, ನಿಸ್ವಾರ್ಥ ನಡೆ ಮೂಲಕ ಬದುಕು ಸಾರ್ಥಕ ಕಡೆ ಸಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಕಾರ್ಯ ಇರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಮಾತನಾಡಿ, ಆರೋಗ್ಯಕರ ಆಲೋಚನೆಗಳು ನೆಮ್ಮದಿಗೆ ರಹದಾರಿ ಆಗಿದ್ದು, ದುಶ್ಚಟಗಳ ವಿರುದ್ಧ ಜನಜಾಗೃತಿ ಅಗತ್ಯ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಶಿವಬಸವಯ್ಯ, ವೀರೇಂದ್ರ, ಜಿತೇಂದ್ರ, ಡಿ.ಎಸ್.ಪ್ರದೀಪ್ , ಜಮುರಾ ಕಲಾಲೋಕದ ಉಮೇಶ್, ಅಭಿಷೇಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net