

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ನಾಡು ನುಡಿ ರಕ್ಷಣೆಗೆ ಹುಟ್ಟಿದ ಸಂಸ್ಥೆ. ಕರ್ನಾಟಕ ಏಕೀಕರಣ ಚಳವಳಿಗೆ ಕಾರಣವಾದ ಸಂಸ್ಥೆಯಾಗಿದೆ ಎಂದು ಸ್ವರ ಮಾಧುರ್ಯ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಕೋಟೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ ಸಂಭ್ರಮ-50 ನಿಮಿತ್ತ ಶನಿವಾರ ಏರ್ಪಡಿಸಿದ್ದ ವೀಣಾ ಪತ್ತಾರ ಹಾಗೂ ಸಂಗಡಿಗರಿಂದ ಕನ್ನಡ ನಾಡ ಗೀತೆಗಳ ಕರೋಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘ ಎಲ್ಲ ಕಲಾವಿದರಿಗೂ ಅವಕಾಶ ನೀಡುತ್ತಾ ಬಂದಿದೆ. ಕರೋಕೆ ಸಂಗೀತಕ್ಕೆ ಅವಕಾಶ ನೀಡಿದ್ದು ಸಂತಸದ ಸಂಗತಿ. ಕರೋಕೆ ಸಂಗೀತವನ್ನು ಯಾರು ಬೇಕಾದರು ಮನೆಯಲ್ಲೇ ಇದ್ದುಕೊಂಡು ಹಾಡಬಹುದು. ಮೂಲ ಗಾಯಕರು ಯಾವ ದಾಟಿಯಲ್ಲಿ ಹಾಡಿದ್ದಾರೆ ಅದೇ ದಾಟಿಯಲ್ಲಿ ಹಾಡಲು ಪ್ರಯತ್ನಿಸಬಹುದು. ವೀಣಾ ಪತ್ತಾರ ಒಬ್ಬ ಶ್ರೇಷ್ಠ ಗಾಯಕಿ. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶಂಕರ ಹಲಗತ್ತಿ ಮಾತನಾಡಿ, ಇಂದು ಹಾಡುಗಾರಿಕೆ ಕಲೆ ವಿಸ್ತೃತವಾಗಿ ಬೆಳೆಯುತ್ತಿದೆ. ಕರೋಕೆ ವ್ಯವಸ್ಥೆಯಲ್ಲಿ ಹಾಡುವವರಿಗೆ ಸಹಜವಾಗಿ ಸಂಗೀತದ ತಿಳಿವಳಿಕೆ ಹೆಚ್ಚಾಗುತ್ತದೆ. ಇದರೊಂದಿಗೆ ಅವರಲ್ಲಿ ಭಾಷಾ ಶುದ್ಧತೆ ಹೆಚ್ಚುತ್ತದೆ. ನಾಡಿನ ಕವಿತೆಗಳ ರಚನಾಕಾರರ ಹೆಸರುಗಳು ಹೆಚ್ಚು ಪ್ರಚಾರಕ್ಕೆ ತಂದು ಕೊಡುತ್ತದೆ. ಇದೊಂದು ಒಳ್ಳೆ ಬೆಳವಣಿಗೆ ಎಂದರು.
ಕುಂದಗೋಳ ತಾಲೂಕಿನ ಯರಿನಾರಾಯಣಪುರದ ಜಾನಪದ ಕಲಾವಿದ ಶರೀಫ ದೊಡಮನಿ ಅವರಿಗೆ ಜನಪದ ಸಿರಿ ಗೌರವ ಸನ್ಮಾನ ಮಾಡಲಾಯಿತು. ನಂತರ ವೀಣಾ ಅನಂತ ಹಾಗೂ ಸಂಗಡಿಗರು ಕನ್ನಡ ನಾಡ ಗೀತೆಗಳನ್ನು ಪ್ರಸ್ತುತಪಡಿಸಿದರು.