

ಬೋರಗಾಂವ: ವೀರಚಾರ್ಯ ದಿವಂಗತ ಬಾಬಾಸಾಹೇಬ ಕುಚನೂರೆ ಅವರ ಅವಿರತ ಪ್ರಯತ್ನದಿಂದ ವೀರ ಸೇವಾದಳ ಸಂಘಟನೆ ಕಳೆದ 45 ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ. ವೀರಸೇವಾ ದಳದ ಕಾರ್ಯಕರ್ತರು ದಕ್ಷಿಣ ಭಾರತ ಜೈನ ಸಭಾ ಮತ್ತು ವೀರ ಸೇವಾದಳದ ಇತಿಹಾಸ, ತೀರ್ಥಂಕರ, ಶಾಂತಿಸಾಗರ ಮಹಾರಾಜರ ಮತ್ತು ವೀರಾಚಾರ್ಯರ ಜೀವನ ಚರಿತ್ರೆ ಓದಿ ಜೈನ ಸಮುದಾಯ ಬಲಪಡಿಸಲು ಪ್ರಯತ್ನಿಸಬೇಕು ಎಂದು ಪ್ರಾಧ್ಯಾಪಕ ಎನ್.ಡಿ.ಬಿರನಾಳೆ ಹೇಳಿದರು.
ಪಟ್ಟಣದ ಆದಿಸಾಗರ ಜೈನಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಸೇವಾದಳದ 46ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಚೇರ್ಮನ್ ಬಾಳಾಸಾಹೇಬ ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ ವೀರಸೇವಾ ದಳವನ್ನು ಹೆಚ್ಚಿಸಿ, ವೀರಸೇವಾದಳದ ವತಿಯಿಂದ ಸಂಸ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷ ಬಾಲಚಂದ್ರ ಪಾಟೀಲ ಮಾತನಾಡಿ, ವೀರಾಚಾರ್ಯ ಬಾಬಾಸಾಹೇಬ ಕುಚನೂರೆ ಅವರಲ್ಲಿ ಸೇವಾ ಮನೋಭಾವನೆ ಇತ್ತು. ಪಂಚಕಲ್ಯಾಣಕ ಪೂಜೆಗೆ ಲಕ್ಷ ಲಕ್ಷ ರೂ.ಖರ್ಚು ಮಾಡುವ ಬದಲು ಕಡಿಮೆ ಖರ್ಚಿನೊಂದಿಗೆ ಉಳಿದ ಹಣವನ್ನು ಸಂಸ್ಕೃತಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಹಣ ವ್ಯಯಿಸಬೇಕು ಎಂದರು. ಮುಖಂಡರಾದ ಸುಭಾಷ ಮಗದುಮ, ಅಜಿತ್ ಭಂಡೆ, ರಾವಸಾಹೇಬ ಜಿ. ಪಾಟೀಲ, ಅರವಿಂದ ಮಜ್ಲೇಕರ, ಮೀನಾಕ್ಷಿ ರಾವಸಾಹೇಬ ಪಾಟೀಲ ಅವರು ವೀರಸೇವಾ ದಳಕ್ಕೆ ಯಾವಾಗಲೂ ಸಹಾಯ ಮಾಡಲು ಬದ್ಧರಾಗಿದ್ದೇವೆ ಎಂದರು.
ವೀರಸೇವಾ ದಳಕ್ಕೆ ದಿವಂಗತ ರಾವಸಾಹೇಬ ಪಾಟೀಲ ಕುಟುಂಬದಿಂದ 1 ಲಕ್ಷ ಹಾಗೂ ಅರಿಹಂತ ಕೋ-ಆಪ್ ಸೊಸೈಟಿಯಿಂದ 1 ಲಕ್ಷ ಹಾಗೂ ಕರ್ಮವೀರ ಪಾಟೀಲ ಬ್ಯಾಂಕ್‌ನಿಂದ 4 ಲಕ್ಷ ರೂ. ದೇಣಿಗೆ ನೀಡಲಾಯಿತು. ದಕ್ಷಿಣ ಭಾರತ ಜೈನ ಸಭಾದ ಮಾಜಿ ಅಧ್ಯಕ್ಷ ಶ್ರಾವಕರತ್ನ ದಿವಂಗತ ರಾವಸಾಹೇಬ ಪಾಟೀಲ ಅವರ ಚಿತ್ರವಿರುವ 2025ರ ಕ್ಯಾಲೆಂಡರನ್ನು ಗಣ್ಯರು ಬಿಡುಗಡೆ ಮಾಡಿದರು.
ದಕ್ಷಿಣ ಭಾರತದ ಜೈನ ಸಭಾದ ಮಹಾಮಂತ್ರಿ ಡಾ.ಅಜಿತ ಪಾಟೀಲ, ಜಂಟಿ ಕೋಶಾಧಿಕಾರಿ ಅರವಿಂದ ಮಜಲೇಕರ, ಡಾ. ಚಂದ್ರಕಾಂತ ಚೌಗುಲೆ, ಮಹಾವೀರ ಪಾಟೀಲ, ಸಾಗರ ಚೌಗುಲೆ, ಪ್ರೊ. ಡಿ. ಎ. ಪಾಟೀಲ, ಭೂಪಾಲ ಗಿರಮಲ, ಅಶೋಕ ಬಂಕಾಪುರೆ, ಪ್ರಕಾಶ ದಾನೋಳೆ, ಅನಿಲ ಠಿಕಾಣೆ, ರಾವಸೋ ಕುನ್ನೂರೆ, ಸಿದ್ದಪ್ಪ ನಾಗನೂರ, ಶಶಿಕಾಂತ ರಾಜೋಬಾ, ಶ್ರೇಣಿಕ ಪಾಟೀಲ, ದಕ್ಷಿಣ ಭಾರತ ಜೈನ ಸಭಾ ಹಾಗೂ ವೀರಸೇವಾ ದಳದ ಕೇಂದ್ರ ಸಮಿತಿ ಸದಸ್ಯರು ಶ್ರಾವಕ, ಶ್ರಾವಕಿಯರು ಹಾಜರಿದ್ದರು.
ವೀರಸೇವಾ ದಳದ 46 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ದಿವಂಗತ ರಾವಸಾಹೇಬ ಪಾಟೀಲ ಅವರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಮೀನಾಕ್ಷಿ ಪಾಟೀಲ, ಬಾಲಚಂದ್ರ ಪಾಟೀಲ, ರಾವಸಾಹೇಬ್ ಜಿ .ಪಾಟೀಲ, ಬಾಳಸಾಹೇಬ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ ಇದ್ದರು.