

ಮಡಿಕೇರಿ:
ಬಹುನಿರೀಕ್ಷಿತ ಮಡಿಕೇರಿ ಮತ್ತು ಕುಶಾಲನಗರದಲ್ಲಿನ ಒಳಚರಂಡಿ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಸುಮಾರು ೫೪ ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಕುಶಾಲನಗರ ಒಳಚರಂಡಿ ಯೋಜನೆ ಕಾಮಗಾರಿಗೆ ನಿಗದಿಪಡಿಸಿದ್ದ ಕಾಲಾವಧಿ ಮೀರಿದ್ದರೂ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಕುಶಾಲನಗರ ಪಟ್ಟಣ, ಗುಮ್ಮನಕೊಲ್ಲಿ ಹಾಗೂ ಮುಳ್ಳುಸೋಗೆ ಗ್ರಾಮದ ನಿವಾಸಿಗಳಿಗೆ ಪ್ರಯೋಜನಕಾರಿಯಾದ ಈ ಯೋಜನೆಗೆ ಸರ್ಕಾರ ೨೦೧೨ರಲ್ಲಿ ಅನುಮೋದನೆ ನೀಡಿತ್ತು. ಆದರೆ ಕಾಮಗಾರಿ ಆರಂಭವಾಗಿದ್ದು ಮಾತ್ರ ೨೦೧೪ರಲ್ಲಿ. ಅಂದಿನ ನಗರಾಭಿವೃದ್ಧಿ ಖಾತೆ ಮಂತ್ರಿ ವಿನಯಕುಮಾರ್ ಸೊರಕೆ ಚಾಲನೆ ನೀಡಿದ್ದರು. ಒಪ್ಪಂದ ಪ್ರಕಾರ ೨೦೧೭ರ ಜೂನ್‌ಗೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ೨೦೨೪ ಫೆಬ್ರವರಿ ಬಂದರೂ ಯೋಜನೆ ಬಳಕೆಗೆ ಲಭ್ಯವಾಗಿಲ್ಲ.
ಮಡಿಕೇರಿಯಲ್ಲೂ ಯುಜಿಡಿ ಕಾಮಗಾರಿ ಕತೆ ಇದಕ್ಕಿಂತಲೂ ಬೇರೆಯಲ್ಲ. ಇಲ್ಲಿ ೪೦ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಗುಡ್ಡಗಾಡು ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಮಡಿಕೇರಿಗೆ ಇಂಥ ಯೋಜನೆ ಅಗತ್ಯವಿತ್ತೇ ಎನ್ನುವ ಪ್ರಶ್ನೆಗಳ ನಡುವೆಯೇ ಕಾಮಗಾರಿ ನಡೆಸಲಾಗಿದ್ದರೂ ಇದಿನ್ನೂ ಪೂರ್ಣವಾಗಿಲ್ಲ. ಯೋಜನೆಯನ್ನು ೩ ವರ್ಷಗಳಲ್ಲಿ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಯುಜಿಡಿಯಲ್ಲಿ ಪ್ರಮುಖ ಪಾತ್ರ ವಹಿಸುವ ವೆಟ್‌ವೆಲ್ ಮತ್ತು ಎಸ್‌ಟಿಪಿ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಇನ್ನು ಕೂಡ ಪೂರ್ಣ ಪ್ರಮಾಣದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈ ಸೇರಿಲ್ಲ. ಎಸ್‌ಟಿಪಿಗೆ ಗುರುತಿಸಿರುವ ಸ್ಥಳಕ್ಕೆ ರಸ್ತೆಯೇ ಇಲ್ಲ.
ಹೀಗೆ ಜಿಲ್ಲೆಯ ಎರಡು ಪ್ರಮುಖ ನಗರಗಳಲ್ಲಿ ರಸ್ತೆಯನ್ನೆಲ್ಲಾ ಅಗೆದು, ಹಾಳು ಮಾಡಿ ಯುಜಿಡಿಯೂ ಇಲ್ಲದೇ ಸರಿಯಾದ ರಸ್ತೆಯೂ ಇಲ್ಲದಿರುವ ಸ್ಥಿತಿಯಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಉತ್ತಮಪಡಿಸುವ ಅಮೃತ್ ೨.೦ ಯೋಜನೆಗೆ ಈ ಎರಡು ನಗರಗಳು ಮಾತ್ರವಲ್ಲದೆ ವಿರಾಜಪೇಟೆ ಮತ್ತು ಸೋಮವಾರಪೇಟೆ ಪಟ್ಟಣದಲ್ಲೂ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಕೇಂದ್ರ ಸರ್ಕಾರ ಶೇ. ೫೦, ರಾಜ್ಯ ಸರ್ಕಾರ ಶೇ. ೪೦ ಹಾಗೂ ಸ್ಥಳೀಯ ಸಂಸ್ಥೆಗಳ ಶೇ. ೧೦ರ ಅನುನುದಾನ ಈ ಯೋಜನೆ ರೂಪಿಸಲಾಗಿದೆ. ಮಡಿಕೇರಿ ನಗರಕ್ಕೆ ೨ ವಿಭಾಗಗಳಲ್ಲಿ ತಲಾ ೧೯.೯೦ ಕೋಟಿ ಮತ್ತು ೨೭. ೫೦ ಕೋಟಿ ರೂ.ಗಳ ಯೋಜನೆ ತಯಾರಿಸಲಾಗಿದೆ. ಮಡಿಕೇರಿ ನಗರಕ್ಕೆ ಕುಂಡ ಮೇಸ್ತ್ರಿ ಮತ್ತು ಕೂಟು ಹೊಳೆಯಿಂದ ವಿರಾಜಪೇಟೆಗೆ ಬೇತ್ರಿಯಿಂದ, ಸೋಮವಾರಪೇಟೆಗೆ ಹಾರಂಗಿಯಿಂದ ಹಾಗೂ ಕುಶಾಲನಗರಕ್ಕೆ ಕಾವೇರಿ ಹೊಳೆಯಿಂದ ನೀರು ಸರಬರಾಜು ವ್ಯವಸ್ಥೆ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಇದನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯನ್ನೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಲಾಗಿದೆ. ಯುಜಿಡಿ ಕಾಮಗಾರಿಯಲ್ಲಿ ಅದ್ವಾನ ಮಾಡಿರುವ ಮಂಡಳಿ ಕುಡಿಯುವ ನೀರಿನ ಕಾಮಗಾರಿ ಹೇಗೆ ನಿರ್ವಹಿಸಬಹುದು ಎನ್ನುವ ಸಾರ್ವಜನಿಕರ ಪ್ರಶ್ನೆಗಳ ಮಧ್ಯೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.
ಇದು ರಾಜ್ಯ ಸರ್ಕಾರದ ಕಣ್ಣೊರೆಸುವ ತಂತ್ರ. ಜನರಿಗೆ ಅನುಕೂಲ ಮಾಡುವಂಥ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಸರಿಯಾದ ರೀತಿ ಅನುಷ್ಠಾನ ಮಾಡುತ್ತಿಲ್ಲ. ಶಂಕುಸ್ಥಾಪನೆ ಮಾತ್ರ ಮಾಡಲಾಗುತ್ತಿದೆ. ಅದಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಜಿಲ್ಲೆಯ ಜನರು ಎಲ್ಲವನ್ನೂ ನೋಡುತಿದ್ದಾರೆ. ಕೊಡಗಿನವರನ್ನು ಮರಳು ಮಾಡಲು ಸಾಧ್ಯವಿಲ್ಲ. ಇಂತಹ ಕಣ್ಣೊರೆಸುವ ಕೆಲಸಕ್ಕೆ ತಕ್ಕ ಪಾಠ ಮುಂದಿನ ದಿನದಲ್ಲಿ ಜನ ಕಲಿಸಲಿದ್ದಾರೆ.
ಬಿ.ಎಸ್. ಅನಂತ್ ಕುಮಾರ್, ಕಾರ್ಯದರ್ಶಿ, ಕೊಡಗು ಜಿಲ್ಲಾ ಬಿಜೆಪಿ
ಮೊದಲು ಗಲ್ಲಿಗಲ್ಲಿಗೂ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಕಲ್ಪಿಸಲಿ. ನಂತರ ಹೊಸ ಹೊಸ ಯೋಜನೆಗಳನ್ನು ಮಾಡುವತ್ತ ಗಮನ ಹರಿಸಲಿ. ಈಗಾಗಲೇ ಒಂದು ಯೋಜನೆ ವಿಫಲಗೊಂಡಿದ್ದು, ಅದರ ಪರಾಮರ್ಶೆ ಮಾಡದೆ ಮತ್ತೊಂದು ಯೋಜನೆಗೆ ಕೈ ಹಾಕಿದರೆ ಸಾರ್ವಜನಿಕರ ಹಣ ಪೋಲು ಮಾಡಿದಂತೆ.
ಮೋಹಿತ್ ರಾಜ್, ಗೋಣಿಕೊಪ್ಪ ನಿವಾಸಿ
ಪಟ್ಟಣಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಪಟ್ಟಣ ಪಂಚಾಯಿತಿ ಎಚ್ಚರ ವಹಿಸಿಕೊಳ್ಳಬೇಕು. ಸರ್ಕಾರದ ಹೊಸ ಯೋಜನೆಗಳು ಬಂದಾಗ ಯೋಜನೆಗಳ ಪ್ರಗತಿಗೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ, ಕಳಪೆಯಾಗದಂತೆ ಎಚ್ಚರ ವಹಿಸಬೇಕು. ಯೋಜನೆಗಳ ವೈಫಲ್ಯಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಬಾರದು.
ಸಿ.ಎಸ್. ಪೊನ್ನಪ್ಪ, ಕೃಷಿಕ, ಚನ್ನಾಪುರ ಗ್ರಾಮ, ಸೋಮವಾರಪೇಟೆ.
ಯುಜಿಡಿ ಕಾಮಗಾರಿ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ಆಗಿದೆ. ಗುಮ್ಮನನಕೊಲ್ಲಿ ಸರ್ವೇ ನಂಬರ್ ೫/೧ರಲ್ಲಿ ಸ್ಥಾಪಿಸಿರುವ ಸಂಸ್ಕರಣಾ ಘಟಕ ಕೂಡ ಅವೈಜ್ಞಾನಿಕವಾಗಿದೆ. ಜನರ ಕೋಟಿಗಟ್ಟಲೆ ರೂ. ತೆರಿಗೆ ಹಣ ಈ ರೀತಿ ಪೋಲಾಗುತ್ತಿರುವುದು ವಿಪರ್ಯಾಸ.
ಸಿ. ಎಂ. ಆಸಿಫ್, ಮಾಜಿ ಸದಸ್ಯ, ಗ್ರಾಮ ಪಂಚಾಯತಿ, ಮುಳ್ಳುಸೋಗೆ
ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮೇಲ್ದರ್ಜೆಗೆ ಏರಿಸುವ ಸಲುವಾಗಿ ಅಮೃತ್ ೨.೦ ಯೋಜನೆ ಅಡಿಯಲ್ಲಿ ಒಟ್ಟು ೪೫.೮೬ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ. ಜಲಮೂಲಗಳು ಕ್ಷೀಣವಾಗುತ್ತಿರುವ ಸಂದರ್ಭದಲ್ಲಿ ಅಮೂಲ್ಯವಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳ್ಳುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿ ಆಗಲಿದೆ. ನಗರದಲ್ಲಿ ಎಲ್ಲಾ ಕಡೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗುವಂತೆ ಮಾಡಲು ಎಲ್ಲಾ ಕಡೆಗೂ ಪೈಪ್ ಲೈನ್ ಹಾಕಲಾಗುತ್ತದೆ. ೨ ಹಂತಗಳಲ್ಲಿ ಈ ಕಾಮಗಾರಿ ನಡೆಯಲಿದೆ. ಯುಜಿಡಿಗೆ ಸಂಬಂಧಿಸಿದಂತೆ ಶೇ. ೬೫ರಷ್ಟು ಕಾಮಗಾರಿ ಮುಗಿದಿದೆ. ಎಸ್‌ಟಿಪಿ ನಿರ್ಮಾಣ ಆಗಲು ಬಾಕಿಯಿದ್ದು, ಆದಷ್ಟು ಬೇಗ ಈ ಕೆಲಸ ಮುಗಿಸುವಂತೆ ನೋಡಿಕೊಳ್ಳಲಾಗುವುದು.
ಅನಿತಾ ಪೂವಯ್ಯ, ಅಧ್ಯಕ್ಷೆ, ನಗರಸಭೆ ಮಡಿಕೇರಿ
ಕುಶಾಲನಗರದಲ್ಲಿ ಯುಜಿಡಿ ಕಾಮಗಾರಿಗೆ ಸಂಬಂಧಿಸಿದಂತೆ ೭೨ ಕಿಮೀ ಪೈಪ್‌ಲೈನ್ ಪೂರ್ಣವಾಗಿದೆ. ೨,೬೦೦ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗಿದೆ. ಎಸ್‌ಟಿಪಿ ಕಾಮಗಾರಿ ಶೇ.೯೦ರಷ್ಟು ಮುಗಿದಿದ್ದು, ಭರದಿಂದ ಕೆಲಸ ಆಗುತ್ತಿದೆ. ಈ ಕಾಮಗಾರಿ ಪೂರ್ಣವಾದರೆ ಮೊದಲಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರ್ಚ್‌ನಿಂದ ಯುಜಿಡಿಯ ಪ್ರಾಯೋಗಿಕ ಕಾಯಾಚರಣೆ ಆರಂಭಿಸಬಹುದು. ಶೇ. ೨೦ರಷ್ಟು ಭಾಗ ಪೂರೈಸುವ ಗುಮ್ಮನಕೊಲ್ಲಿ ಭಾಗದ ಕಾಮಗಾರಿಗೆ ಮತ್ತೆ ಟೆಂಡರ್ ಕರೆಯಲಾಗಿದೆ. ಇಲ್ಲಿಯ ಕಾಮಗಾರಿ ಪೂರ್ತಿ ಆದರೆ ಕುಶಾಲನಗರ ಪುರಸಬೆ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಪೂರ್ಣವಾಗುತ್ತದೆ.
ಆನಂದ್, ಸಹಾಯಕ ಅಭಿಯಂತರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಯುಜಿಡಿಗೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಸುಮಾರು ೭೦ ಕಿಮೀ ನೆಟ್‌ವರ್ಕಿಂಗ್ ಕೆಲಸ ೨೦೧೮ರಲ್ಲೇ ಆಗಿದೆ. ೩ ವೆಟ್‌ವೆಲ್ ಪೈಕಿ ೨ ವೆಟ್‌ವೆಲ್‌ಗೆ ಅಗತ್ಯವಿರುವ ಜಾಗವನ್ನು ನಗರಸಭೆ ನಮಗೆ ಹಸ್ತಾಂತರಿಸಿದೆ. ಉಳಿದ ಒಂದು ವೆಟ್ ವೆಲ್ ಜಾಗ ಹಸ್ತಾಂತರ ಆಗಬೇಕಿದೆ. ಎಸ್‌ಟಿಪಿ ನಿರ್ಮಾಣಕ್ಕೆ ೧.೬ ಎಕರೆ ಜಾಗ ಮಾತ್ರ ಹಸ್ತಾಂತರ ಆಗಿದೆ. ಇನ್ನೂ ೩ ಎಕರೆ ಜಾಗ ನಮಗೆ ಹಸ್ತಾಂತರ ಆಗಬೇಕಿದೆ. ಈ ಜಾಗಕ್ಕೆ ತೆರಳಲು ರಸ್ತೆಯೂ ಇಲ್ಲ. ಇದನ್ನೂ ಒದಗಿಸಿಕೊಡಬೇಕಿದೆ. ಇವಿಷ್ಟು ಆದರೆ ಕಾಮಗಾರಿ ಪೂರ್ಣಗೊಳ್ಳಲು ಸಹಕಾರಿ ಆಗಲಿದೆ.
ಎ. ಪ್ರಸನ್ನಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಕುಶಾಲನಗರದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಶಾಸಕ ಡಾ. ಮಂತರ್ ಗೌಡ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಡಿ ಒಳಗೊಂಡಂತೆ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರ ಸಭೆ ನಡೆಸಲಾಗಿದೆ. ಮುಂದಿನ ತಿಂಗಳ ೧೫ರ ಒಳಗಾಗಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲಾ ಕೆಲಸ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ೨ ದಿನ ಆಚೆ ಈಚೆ ಆದರೂ ಮಾರ್ಚ್ ೧೫ರಿಂದ ಯುಜಿಡಿ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಲಿದೆ.
ಪ್ರಮೋದ್ ಮುತ್ತಪ್ಪ, ಅಧ್ಯಕ್ಷ, ನಗರ ಕಾಂಗ್ರೆಸ್ ಕುಶಾಲನಗರ
ಕುಶಾಲನಗರ ಪಟ್ಟಣ ಪಂಚಾಯಿತಿ ಆದ ನಂತರ ಅನುಷ್ಠಾನಕ್ಕೆ ಬಂದ ದೊಡ್ಡ ಯೋಜನೆ ಈ ಯುಜಿಡಿ. ಆದರೆ ಇದು ಇನ್ನೂ ಪೂರ್ಣಗೊಂಡಿಲ್ಲ. ಸದ್ಯದಲ್ಲೇ ಯುಜಿಡಿ ಕಾಮಗಾರಿ ಪೂರ್ಣ ಆಗುತ್ತದೆ ಎಂದು ಆಶ್ವಾಸನೆ ಕೊಡುತ್ತಲೇ ಬರಲಾಗುತ್ತಿದೆ. ಆದಷ್ಟು ಬೇಗ ಈ ಕೆಲಸ ಪೂರ್ತಿ ಆಗಬೇಕು. ತೆರಿಗೆ ಕಟ್ಟುವ ಜನಸಾಮಾನ್ಯರಿಗೆ ಈ ಯೋಜನೆಯ ಉಪಯೋಗ ಪೂರ್ಣವಾಗಿ ಲಭ್ಯವಾಗುವಂತೆ ಆಗಬೇಕು.
ಕೆ.ಆರ್. ರೇಣುಕಾ, ಸದಸ್ಯೆ, ಪುರಸಭೆ, ಕುಶಾಲನಗರ