

ವಿಕ್ರಮ ನಾಡಿಗೇರ ಧಾರವಾಡ
ಕೇಂದ್ರ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ಅದರಲ್ಲಿ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವುದು ಸಹ ಒಂದು. ಈ ಯೋಜನೆಗಳನ್ನು ಕೆಲ ವರ್ಷಗಳ ಹಿಂದಷ್ಟೇ ನವೀಕರಣಗೊಂಡು ಉದ್ಘಾಟನೆಯಾದ ರೈಲು ನಿಲ್ದಾಣದ ಮೇಲ್ಛಾವಣಿ ಪಿಒಪಿ ಕಳಚುತ್ತಿವೆ. ಇದು ಕಾಮಗಾರಿಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿ.
ಅಮೃತ ಭಾರತ ನಿಲ್ದಾಣಗಳ ಯೋಜನೆ ಅಡಿ ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿಸಲಾಗಿದೆ. ನವೀಕರಣಗೊಂಡ ಸುಸಜ್ಜಿತ ನಿಲ್ದಾಣವನ್ನು 2022ರ ಅಕ್ಟೋಬರ್ 11ರಂದು ರೈಲ್ವೆ ಸಚಿವರು ಉದ್ಘಾಟಿಸಿದ್ದರು. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವೇಟಿಂಗ್ ರೂಂ, ಧಾರವಾಡ ಇತಿಹಾಸ ತಿಳಿಸುವ ಚಿತ್ರಕಲೆ, ಹೀಗೆ ಅನೇಕ ಸೌಲಭ್ಯ ನೀಡಿದ್ದು ಪ್ರಯಾಣಿಕರಿಗೆ ಖುಷಿಯಾಗಿತ್ತು. ಆದರೆ 2 ವರ್ಷದಲ್ಲಿ ಕಾಮಗಾರಿ ಬಣ್ಣ ಬಯಲಾಗಿದ್ದು, ಜನರಲ್ಲಿ ಬೇಸರ ಮೂಡಿಸಿದೆ.
ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಸೇರಿ 2-3 ಕಡೆಗಳಲ್ಲಿ ಮೇಲ್ಛಾವಣಿ ಪಿಒಪಿ ಕಳಚಿ ಬಿದ್ದು ಸೋರುವಂತಾಗಿದೆ. ಇದಲ್ಲದೆ ಪ್ಲಾಟಫಾರ್ಮ್ 1ರಲ್ಲಿ ಕೆಲ ಕಡೆಗಳಲ್ಲಿ ಮೇಲ್ಛಾವಣಿ ಬಿರುಕು ಬಿಟ್ಟು ಸೋರಲಾರಂಭಿಸಿದೆ. ಇದರಿಂದ ಇಡೀ ಆವರಣದಲ್ಲಿ ನೀರು ಹರಿಯುವುದಲ್ಲದೆ, ಜನರು ಕುಳಿತುಕೊಳ್ಳುವ ಕಟ್ಟೆಗಳು ತಂಪು ಹಿಡಿಯುತ್ತಿವೆ.
ಇದರಿಂದ ಟಿಕೆಟ್ ಪಡೆಯುವ ಹಾಗೂ ರೈಲಿಗಾಗಿ ಕಾದುಕುಳಿತುಕೊಳ್ಳುವ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಮೇಲ್ಛಾವಣಿಯಿಂದ ಸೋರಿಕೆಯಾದ ನೀರು ಆವರಣದಲ್ಲಿ ಬೀಳುತ್ತಿರುವುದರಿಂದ ಪ್ರಯಾಣಿಕರು ಜಾರಿ ಬೀಳಬಹುದು ಎಂಬ ಭಯದಲ್ಲೇ ಓಡಾಡುವಂತಾಗಿದೆ. ಒಮ್ಮೆ ಧಾರಾಕಾರ ಮಳೆ ಸುರಿದರೆ ಸಾಕು ಇಡೀ ಆವರಣದ ಅಂದವೇ ಕೆಡುವಂತಾಗಿದೆ.
ಈ ಹಿಂದೆ ಇದ್ದ ಕಟ್ಟಡ ಸಾಕಷ್ಟು ಗಟ್ಟಿಯಾಗಿಯೇ ಇತ್ತು. ಎಂತಹದ್ದೇ ಮಳೆ ಬಂದರೂ ಸೋರಿದ ಪ್ರಸಂಗ ನಡೆದಿರಲಿಲ್ಲ. ಆದರೆ ಈಗಿನ ಕಟ್ಟಡ 2 ವರ್ಷದಲ್ಲೇ ಸೋರುತ್ತಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ನಿಲ್ದಾಣಗಳ ಅಭಿವೃದ್ಧಿಯಾಗಬೇಕು ಎಂಬುದು ಸರಿ. ಆದರೆ ಅಭಿವೃದ್ಧಿಗೆ ವ್ಯಯಿಸುವ ಕೋಟ್ಯಂತರ ರೂ. ಅನುದಾನವೂ ಸದ್ಬಳಕೆಯಾಗಬೇಕು ಆಗುವಂತೆ ಗಮನ ಹರಿಸುವುದೂ ಮುಖ್ಯವಾಗಿದೆ ಎಂಬುದು ಪ್ರಯಾಣಿಕರ ಮಾತಾಗಿದೆ.
ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಎರಡೇ ವರ್ಷದಲ್ಲಿ ಸೋರುತ್ತಿರುವುದು ಬೇಸರದ ಸಂಗತಿ. ಕಾಮಗಾರಿ ಗುಣಮಟ್ಟದ್ದಾಗಿರಬೇಕಿತ್ತು. ಮೇಲಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೂಡಲೇ ದುರಸ್ತಿ ಕಾರ್ಯ ನಡೆಸಬೇಕು. ಇದಲ್ಲದೆ ತತ್ಕಾಲ್ ಟಿಕೆಟ್ ಪಡೆಯಲು ಬರುವವರಿಗೆ ಕುಳಿತುಕೊಳ್ಳಲು ಅಗತ್ಯಕ್ಕೆ ತಕ್ಕಷ್ಟು ಆಸನಗಳ ವ್ಯವಸ್ಥೆ ಸಹ ಇಲ್ಲ. ಆಸನ ವ್ಯವಸ್ಥೆ ಮಾಡುವಂತೆ ಮನವಿ ಸಹ ಮಾಡಿದ್ದೇವೆ.*ಪಿ.ಜಿ. ನರಸಾಪುರ, ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ