

ಬಾದಾಮಿ: ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯ ತೃಪ್ತಿಕರವಾಗಿಲ್ಲ. ಎರಡು ತಿಂಗಳೊಳಗೆ ನಿಮ್ಮ ಇಲಾಖೆಯ ಬಗ್ಗೆ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ನಾಶವಾದರೆ ಎಷ್ಟು ಪರಿಹಾರ ಧನ ಸಿಗುತ್ತದೆ? ರಸಗೊಬ್ಬರ ದಾಸ್ತಾನು ಎಷ್ಟಿದೆ? ವಿಮೆ ಎಷ್ಟು ಹಣ ರೈತರು ಪಡೆದಿದ್ದಾರೆ? ಎಂದು ಪ್ರಶ್ನಿಸಿದಾಗ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ ಮಾಹಿತಿ ನೀಡಲು ತಡಬಡಾಯಿಸಿದರು. ಆಗ ಗರಂ ಆದ ಶಾಸಕರು, ಮುಂದಿನ ಸಭೆಗೆ ಸರಿಯಾದ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ವಿವಿಧ ಇಲಾಖೆಗಳಿಂದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಗ್ನಿ ಅವಘಡಗಳು ಸಂಭವಿಸಿದರೆ ಕೂಡಲೇ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಹೇಳಿದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶ್ರೀಕಾಂತ ಸಬನೀಸ್ ಮಾತನಾಡಿ, ಪಶುಪಾಲನಾ ಇಲಾಖೆಗೆ ಸಂಬಂಧಿಸಿದಂತೆ ಅಗತ್ಯ ಔಷಧ ಇದ್ದು, ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಪಶುಗಳು ಆಕಸ್ಮಿಕ ಮರಣ ಹೊಂದಿದರೆ ಮಾಲೀಕರಿಗೆ ಪರಿಹಾರ ಧನ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿರುವ ಪ್ರಮುಖ ಕೆರೆಗಳಿಗೆ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸೂಚಿಸಿದರು. ಜಾಕ್‌ವೆಲ್ ಮತ್ತು ಬ್ಯಾರೇಜ್ ಗೇಟ್ ಇರಿಸಲು ಮತ್ತು ಅವುಗಳನ್ನು ನೋಡಿಕೊಳ್ಳಲು ಪ್ರತಿಯೊಂದು ಪಂಚಾಯಿತಿ ಪಿಡಿಒ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಲು ಹೇಳಿದರು.
ಕೆಲವೆಡೆ ರೈತರಿಂದ ಕುಡಿಯುವ ನೀರು ಬಾಡಿಗೆ ತೆಗೆದುಕೊಂಡಿದ್ದು, ಅವರಿಗೆ 3 ತಿಂಗಳ ಬಾಡಿಗೆ ಕೊಟ್ಟಿಲ್ಲ ಎಂಬ ದೂರಿದೆ. ನಿಮ್ಮ ಪೇಮೆಂಟ್ ತಡವಾದರೆ ತಡೆಯುವಿರಾ? ಎಂದು ಪ್ರಶ್ನಿಸಿದ ಶಾಸಕರು, ಕೂಡಲೇ ಹಣ ಪಾವತಿ ಮಾಡಬೇಕು. ತಾಲೂಕಿನಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿ ಮಾಡಲು ಆರ್‌ಡಬ್ಲುೃಎಸ್ ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಮಧುರಾಜ್, ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ತೋಟಗಾರಿಕೆ ಇಲಾಖೆ ಅಧಿಕಾರಿ ಬಿ.ಪಿ. ಪಾಟೀಲ, ತಾಲೂಕು ವೈದ್ಯಾಧಿಕಾರಿ ಡಾ. ಎಂ.ಬಿ. ಪಾಟೀಲ, ಕಂದಾಯ ಇಲಾಖೆ ಅಧಿಕಾರಿ ಉಮೇಶ ಜಾಧವ, ಉಪತಹಸೀಲ್ದಾರ್ ಎಸ್.ಬಿ. ಬೊಮ್ಮನ್ನವರ ಇದ್ದರು.
ಗೈರಾದ ಅಧಿಕಾರಿಗೆ ನೋಟಿಸ್: ಹೆಸ್ಕಾಂ ಅಧಿಕಾರಿ ಸಭೆಗೆ ಹಾಜರಾಗಿಲ್ಲ. ಅವರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ತಹಸೀಲ್ದಾರ್ ಮಧುರಾಜ್ ಅವರಿಗೆ ಶಾಸಕ ಚಿಮ್ಮನಕಟ್ಟಿ ಸೂಚಿಸಿದರು.