ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲಾಘನೀಯ

IMG20251003172733.jpg
Published on

ಧಾರವಾಡ: ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತಾಗಬೇಕು. ಇಂತಹ ಕಾರ್ಯದಲ್ಲಿ ಸಂಘ-ಸಂಸ್ಥೆಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.

ಶುಕ್ರವಾರ ನಡೆದ ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ 143ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ 143 ವರ್ಷಗಳನ್ನು ಪೂರೈಸಿದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಶೈಕ್ಷಣಿಕ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಂಸ್ಥೆ ಕಟ್ಟಿ ಬೆಳೆಸಿದ ಮಹನೀಯರ ತ್ಯಾಗ ಸ್ಮರಿಸಿದ ಅವರು, 19ನೇ ಶತಮಾನದಲ್ಲಿ ಶಿಕ್ಷಣ ದೊರೆಯುವುದು ದುರ್ಲಬವಾಗಿತ್ತು. ಅದರಲ್ಲೂ ಕೆಳ ಸಮುದಾಯಗಳು ಶಿಕ್ಷಣ ಪಡೆಯುವುದು ಕಷ್ಟದ ಕೆಲಸವಾಗಿತ್ತು. ಇದನ್ನರಿತ ಲಿಂಗಾಯತ ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಅದರ ಮೂಲಕ ಸಮಾಜದ ಏಳ್ಗೆ ಬಯಸಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಊಟ, ವಸತಿ, ಉನ್ನತ ವಿದ್ಯಾಭ್ಯಾಸಕ್ಕೆ ಧನ ಸಹಾಯ ಹಾಗೂ ಜ್ಞಾನ ನೀಡುವ ಕಾರ್ಯ ಕೈಗೊಂಡರು. ಇಂತಹ ಸಂಸ್ಥೆಗಳ ಸಹಾಯ ಪಡೆದು ಅನೇಕ ಬಡ, ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡರು. ಇಂತಹ ಮಹತ್ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದರು.

ನಿವೃತ್ತ ಸೇನಾ ಮೇಜರ್ ಬಸವರಾಜ ಗಿಲಗಂಚಿ ಮಾತನಾಡಿ, ವ್ಯಕ್ತಿತ್ವ ಬೆಳವಣಿಗೆ ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ಬಲ ತುಂಬುವ ಕೆಲಸ ಶೈಕ್ಷಣಿಕ ಸಂಸ್ಥೆಗಳು ಮಾಡಬೇಕು. ಇಂತಹ ಕಾರ್ಯ ಮಾಡುವಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಮುಂದಿದೆ. ಲಿಂಗಾಯತ ಸಮಾಜವನ್ನು ಮುನ್ನೆಲೆಗೆ ತರಬೇಕೆಂದು ರಾವ್‌ಬಹದ್ದೂರ್ ಅರಟಾಳ ರುದ್ರಗೌಡರು ಹಾಗೂ ರಾವ್‌ಬಹದ್ದೂರ್ ಗಿಲಗಂಚಿ ಗುರುಸಿದ್ಧಪ್ಪನವರು ದಾನಿಗಳಿಂದ ಜಮೀನು, ಧನ ಸಹಾಯವನ್ನು ಪಡೆದು ಲಿಂಗಾಯತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಯು.ಬೆಳ್ಳಕ್ಕಿ ಮಾತನಾಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾಂತ ಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಡಾ.ಸಿ.ರಾಜಶೇಖರ ರಚಿಸಿದ ‘ಆಡಳಿತಾತ್ಮಕ ಕಾನೂನು’ ಕೃತಿ ಬಿಡುಗಡೆ ಮಾಡಲಾಯಿತು. ಸಂಸ್ಥೆ ಕಟ್ಟಿ ಬೆಳೆಸಿದ ಮಹನೀಯರ ವಂಶಸ್ಥರನ್ನು ಸನ್ಮಾನಿಸಲಾಯಿತು. ಉದ್ಯಮಿ ರವೀಂದ್ರ ಪಂಡಿತ, ಸಂಸ್ಥೆಯ ಉಪಾಧ್ಯಕ್ಷ ವಿ.ಬಿ.ಯಳಲಿ, ಜಂಟಿ ಕಾರ್ಯದರ್ಶಿ ಎಸ್.ಎಂ.ಅಗಡಿ, ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್.ತಾಳಿಕೋಟಿ, ಎಂ.ಆರ್.ಇಂಡಿ, ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ ಹಾಗೂ ಸಂಸ್ಥೆಯ ಸದಸ್ಯರು, ಸಿಬ್ಬಂದಿ ಇದ್ದರು. ಕಾನೂನು ವಿದ್ಯಾರ್ಥಿನಿ ತೇಜಸ್ವಿನಿ ಎಂ.ಎಸ್ ನಿರೂಪಿಸಿದರು. ಎಲ್.ಎಸ್. ತಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net