ಸೌಹಾರ್ದ ಸೇತುವೆ ಕಾಮಗಾರಿ ಮುಕ್ತಾಯದತ್ತ

 ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ.
ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ.
Published on

ಪ್ರಮುಖ ಮುಖ್ಯಾಂಶಗಳು

  • ಅಜಿಲಮೊಗರು ಮಸೀದಿ-ಕಡೇಶ್ವಾಲ್ಯ ಕ್ಷೇತ್ರ ಸಂಪರ್ಕದ ಉದ್ದೇಶ
  • 2017ರಲ್ಲಿ ಶಂಕುಸ್ಥಾಪನೆ
ಬಂಟ್ವಾಳ: ತಾಲೂಕಿನ ಎರಡು ಧಾರ್ಮಿಕ ಕ್ಷೇತ್ರಗಳಾದ ಅಜಿಲಮೊಗರು ಮಸೀದಿಯ ಮುಂಭಾಗದಿಂದ ಮತ್ತು ಕಡೇಶ್ವಾಲ್ಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಸಂಪರ್ಕಿಸುವ ಬಹುನಿರೀಕ್ಷಿತ ಸೌಹಾರ್ದ ಸೇತುವೆ ಕಾಮಗಾರಿ ಮತ್ತೆ ಆರಂಭಗೊಂಡು ಭರದಿಂದ ಸಾಗುತ್ತಿದೆ.
ಬಾಕಿ ಉಳಿದಿದ್ದ ಕಡೇಶಿವಾಲಯ ಕಡೆಯ ಎರಡು ಪಿಆರ್ಸ್‌( ಫೌಂಡೇಶನ್ ಸಹಿತ ಪಿಲ್ಲರ್) ಕಾಮಗಾರಿ ಸಂಪೂರ್ಣಗೊಂಡು ಸೇತುವೆ ನಿರ್ಮಾಣವೂ ನಡೆಯುತ್ತಿದ್ದು, ಕಾಮಗಾರಿಯ ಅಂತಿಮ ಸ್ಪರ್ಶ ಮುಗಿದ ಬಳಿಕ ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸೇತುವೆ ಮೇಲಿನ ಗರ್ಡರ್‌ಗಳನ್ನೂ ಅಳವಡಿಸಲಾಗಿದೆ. ಸೇತುವೆ ಮಳೆಗಾಲದ ಮೊದಲು ಲೋಕಾರ್ಪಣೆಗೊಂಡು ಎರಡು ಧಾರ್ಮಿಕ ಶ್ರದ್ಧಾಕೇಂದ್ರಗಳ ನಡುವೆ ಪ್ರಮುಖ ಸಂಪರ್ಕಕೊಂಡಿಯಾಗಲಿದೆ.
ನೇತ್ರಾವತಿ ನದಿಗೆ ಸೇತುವೆ ಮತ್ತು ಸಂಪರ್ಕ ರಸ್ತೆ ಯೋಜನೆಗೆ ನೀಲಿನಕಾಶೆ ಸಿದ್ಧಗೊಂಡು 2017ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆಯಾಗಿತ್ತು. ಆಗ ಸಚಿವರಾಗಿದ್ದ ಬಿ.ರಮಾನಾಥ ರೈ ಪರಿಕಲ್ಪನೆಯಲ್ಲಿ ಎರಡು ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಸೌಹಾರ್ದ ಸೇತುವೆ ಯೋಜನೆಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್)ದಿಂದ 19.84 ಕೋಟಿ ರೂ. ಅನುದಾನ ಮಂಜೂರುಗೊಂಡಿತ್ತು. ಅಜಿಲಮೊಗರಿನಿಂದ ಕಡೇಶ್ವಾಲ್ಯಕ್ಕೆ ಒಟ್ಟು 312 ಮೀ. ಉದ್ದ ಮತ್ತು 10.50 ಮೀ. ಅಗಲದ ಸೇತುವೆ ಜತೆಗೆ ಒಟ್ಟು 378 ಮೀ. ಉದ್ದದ ಸಂಪರ್ಕ ರಸ್ತೆ ಕಾಮಗಾರಿ ಚೆನ್ನೈನ ಎಸ್‌ಪಿಎಲ್ ಕಂಪನಿ ಗುತ್ತಿಗೆ ವಹಿಸಲಾಗಿತ್ತು. ಎಸ್‌ಪಿಎಲ್ ಸಂಸ್ಥೆಗೆ 2019ರಲ್ಲೇ ಟೆಂಡರ್ ಆಗಿದ್ದು, 24 ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಳಿಸುವುದಾಗಿ ಸಂಸ್ಥೆ ಮಾತು ಕೊಟ್ಟಿತ್ತು. 2021ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಒಪ್ಪಂದ ಮಾಡಲಾಗಿತ್ತಾದರೂ ಕರೊನಾ ಸಂದರ್ಭ ಕಾರ್ಮಿಕರ ಕೊರತೆಯಿಂದಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಬಳಿಕ ಮುಂದಿನ ಎರಡು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಗುತ್ತಿಗೆ ಸಂಸ್ಥೆ ಭರವಸೆ ನೀಡಿತ್ತಾದರೂ ಕಾಮಗಾರಿ ಕುಂಠಿತಗೊಂಡಿತ್ತು.
ಅಜಿಲಮೊಗರು ಮಸೀದಿಗೆ ಬಂಟ್ವಾಳ-ಮಣಿಹಳ್ಳ-ಸರಪಾಡಿ-ಅಲ್ಲಿಪಾದೆ ರಸ್ತೆ ಮೂಲಕ ಸಾಗಬೇಕು. ಕಡೇಶ್ವಾಲ್ಯ ಕ್ಷೇತ್ರಕ್ಕೆ ಬಿ.ಸಿ.ರೋಡ್-ಉಪ್ಪಿನಂಗಡಿ ರಾ.ಹೆ. ಮಧ್ಯೆ ಗಡಿಯಾರ ರಸ್ತೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಾಗುತ್ತದೆ. ಸೇತುವೆ ಕಾಮಗಾರಿ ಪೂರ್ಣವಾದರೆ ಬಂಟ್ವಾಳ ತಾಲೂಕಿನ ನಾವೂರು, ಮಣಿನಾಲ್ಕೂರು, ಸರಪಾಡಿ, ಕಡೇಶ್ವಾಲ್ಯ, ಬುಡೋಳಿ, ಬರಿಮಾರು ಹಾಗೂ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಬೆಳ್ತಂಗಡಿ ತಾಲೂಕಿನ ತೆಕ್ಕಾರು, ಬಾರ್ಯ, ತಣ್ಣೀರುಪಂತ ಮತ್ತಿತರ ಪ್ರದೇಶಗಳಿಗೆ ತ್ವರಿತವಾಗಿ ತೆರಳಲು ಅನುಕೂಲವಾಗಲಿದೆ.

ರೈತ ಸಂಘ ಸರಪಾಡಿ ವಲಯ ಆಗ್ರಹ

ಸೌಹಾರ್ದ ಸೇತುವೆ ಶೀಘ್ರ ಸಂಪೂರ್ಣಗೊಳಿಸಲು ಸರಪಾಡಿ ವಲಯ ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಎನ್.ಆದಂ ಕುಂಞ ನೇತೃತ್ವದ ನಿಯೋಗ ಸೇತುವೆ ನಿರ್ಮಾಣ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಶೀಘ್ರ ಕಾಮಗಾರಿ ನಡೆಸುವಂತೆ ಆಗ್ರಹಿಸಿತ್ತು. ಮಳೆಗಾಲದ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸ್ಥೆಯನ್ನು ನಿಯೋಗ ಆಗ್ರಹಿಸಿದೆ.

ಸಚಿವರಿಗೆ ಮನವಿ

ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿದ ಹಿನ್ನೆಲೆ ಅವರ ಸೂಚನೆಯಂತೆ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದರೂ ಫಲಕಾರಿಯಾಗಿರಲಿಲ್ಲ. ಮುಲ್ಲೈ ಮುಗಿಲನ್ ವರ್ಗಾವಣೆಯಾದ ಬಳಿಕ, ಇತ್ತ ಸೌಹಾರ್ದ ಸೇತುವೆಯ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಸ್ಥಳೀಯ ರೈತರು, ಗ್ರಾಮಸ್ಥರು ಸೇತುವೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನಿರಂತರ ಒತ್ತಡ ಹೇರಿದ ಪರಿಣಾಮ ಸೇತುವೆ ಕಾಮಗಾರಿ ಮರು ಆರಂಭಗೊಂಡು ಅಂತಿಮ ಹಂತ ತಲುಪಿದೆ.

ತಾತ್ಕಾಲಿಕ ರಸ್ತೆಯಿಂದ ಅನುಕೂಲ

ಬಿರು ಬಿಸಿಲಿಗೆ ನೇತ್ರಾವತಿ ನದಿಯಲ್ಲಿ ನೀರು ಇಳಿಮುಖವಾದ ಕಾರಣ ಸೇತುವೆ ಪಕ್ಕ ನದಿಗೆ ಮಣ್ಣು ತುಂಬಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಕಾಮಗಾರಿಯ ಸಾಮಾಗ್ರಿಗಳನ್ನು ತ್ವರಿತವಾಗಿ ಸಾಗಾಟ ಮಾಡಲು ಅನುಕೂಲವಾಗುವುದರ ಜತೆಗೆ ಅಜಿಲಮೊಗರು-ಕಡೇಶ್ವಾಲ್ಯ ಸಂಪರ್ಕವೂ ಸಾಧ್ಯವಾಗಿದೆ. ಇತ್ತೀಚೆಗೆ ನಡೆದ ಕಡೇಶ್ವಾಲ್ಯ ದೇವಸ್ಥಾನದ ಜಾತ್ರೋತ್ಸವಕ್ಕೆ ತೆರಳಲು ಸಾವಿರಾರು ಜನರು ಇದೇ ರಸ್ತೆ ಬಳಸಿದ್ದಾರೆ. ಪ್ರಸ್ತುತ ಸಾರ್ವಜನಿಕರು ಸೇತುವೆ ಸಂಪೂರ್ಣಗೊಳ್ಳುವುದನ್ನೇ ಎದುರು ನೋಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net