

ಉಪ್ಪಿನಬೆಟಗೇರಿ: ಬಣ್ಣ ಕೊಡಿಸುವ ಮೂಲಕ ಸರ್ಕಾರಿ ಶಾಲೆಗಳ ಉನ್ನತಿಗೆ ದಾನಿಗಳು ಮುಂದಾಗುತ್ತಿರುವುದು ಶ್ಲಾಘನೀಯ ಎಂದು ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾವಿ ಹೇಳಿದರು.
ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶನಿವಾರ ಜರುಗಿದ ಬಣ್ಣದರ್ಪಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಓದಿಗಾಗಿ ಸರ್ಕಾರಿ ಶಾಲೆಗಳನ್ನು ನೆಚ್ಚಿಕೊಂಡಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು. ಜತೆಗೆ ಶಾಲೆಯಲ್ಲಿರುವ ಕೊಠಡಿಗಳು ಸುಂದರವಾಗಿ ಕಾಣಲು ಬಣ್ಣದರ್ಪಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶತಮಾನ ಕಂಡಿರುವ ಈ ಶಾಲೆಯಲ್ಲಿ ನಟ ಸುರೇಶ ಹೆಬ್ಳೀಕರ ಅವರು ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಅವರಂತೆ ಇಲ್ಲಿರುವ ಮಕ್ಕಳು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು’ ಎಂದರು.
ಪರಿಸರ ಪ್ರೇಮ ತಂಡದ ಸದಸ್ಯರು ಬಣ್ಣದರ್ಪಣದ ಸೇವೆ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಭೀಮಕ್ಕನವರ, ಧಾರವಾಡ ಪರಿಸರ ಪ್ರೇಮ ತಂಡದ ಅಧ್ಯಕ್ಷ ಮಲ್ಲಿಕಾರ್ಜುನ ಉಪ್ಪಿನ, ಹುಬ್ಬಳ್ಳಿ ಈಶ್ವರಿ ಫೌಂಡೇಶನ್ ಅಧ್ಯಕ್ಷ ಸಂತೋಷ ವರ್ಣೇಕರ, ಪವರ್ ಆಫ್ ಯುಥ್ಸ್ ಫೌಂಡೇಷನ್ ಅಧ್ಯಕ್ಷ ರವಿಚಂದ್ರನ್ ದೊಡ್ಡಿಹಾಳ, ಉಪಾಧ್ಯಕ್ಷ ಶ್ರೀನಿವಾಸ ವಾಲಿಕಾರ, ಸುರೇಶ ಬನ್ನಿಗಿಡದ, ವಿಠ್ಠಲ ಭೋವಿ, ಕೃಷ್ಣಾಜಿ ನಾಡಿಗೇರ, ಮೌಲಾಸಾಬ ಕೊಣ್ಣೂರ, ಈರಣ್ಣ ಉಮಣ್ಣವರ, ನಾಗರತ್ನ ಅಂಚಟಗೇರಿ, ಎಲ್.ಐ. ಲಕ್ಕಮ್ಮನವರ ಇತರರಿದ್ದರು.
ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.