

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ‘ಸ್ವದೇಶಿ ದರ್ಶನ್’ ಯೋಜನೆ ಕಾಮಗಾರಿಯನ್ನು ವರ್ಷಾಂತ್ಯದೊಳಗೆ ಪ್ರಾರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾ ರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಇದು ಒಟ್ಟು 80 ಕೋಟಿ ರೂ.ಮೊತ್ತದ ಯೋಜನೆ ಯಾಗಿದೆ. ರಾಜ್ಯದ ಹಂಪಿ ಹಾಗೂ ಮೈಸೂರಿಗೆ ಕೇಂದ್ರ ಸರ್ಕಾರ ‘ಸ್ವದೇಶಿ ದರ್ಶನ್’ ಯೋಜನೆ ಮಂಜೂರು ಮಾಡಲಾಗಿದೆ. ಈ ಯೋಜನೆ ಜಾರಿಯಿಂದ ವಸ್ತು ಪ್ರದರ್ಶನ ಆವರಣಕ್ಕೆ ವರ್ಷದ 365 ದಿನವೂ ಪ್ರವಾಸಿಗರನ್ನು ಸೆಳೆಯಬಹುದು. ‘ಸರ್ವಋತು’ ಪ್ರವಾಸೋದ್ಯಮ ಪರಿಕಲ್ಪನೆಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಯೋಜನೆ ಕುರಿತು ಇಂದು ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ. ಯೋಜನೆಯ ಮೊದಲ ಹಂತದ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು 20 ದಿನಗಳ ಒಳಗೆ ಸಲ್ಲಿಸುವಂತೆ ಯೋಜನೆಯನ್ನು ಅನುಷ್ಠಾನಗೊಳಿಸುವ ಡೆಲಾಯ್ಟ ಕಂಪನಿಗೆ ನಿರ್ದೇಶನ ನೀಡ ಲಾಗಿದೆ. ವಸ್ತು ಪ್ರದರ್ಶನ ಆವರಣದಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಕೇಂದ್ರದಲ್ಲಿ ನಿರ್ಮಾಣ ಮಾಡುವ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾಜಕೀಯ ಕಾರ್ಯಕ್ರಮ, ವಿವಾಹ ಮುಂತಾದ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುವುದು. ಇದರಿಂದ ಪ್ರಾಧಿಕಾರಕ್ಕೆ ಹೆಚ್ಚಿನ ಆದಾಯ ದೊರೆಯುವ ನಿರೀಕ್ಷೆ ಇದೆ ಎಂದರು.
ಈ ಕೇಂದ್ರದಲ್ಲಿ ಮೈಸೂರಿನ ಜಿಐ ಉತ್ಪನ್ನಗಳು ಹಾಗೂ ಚನ್ನಪಟ್ಟಣದ ಗೊಂಬೆ ಸೇರಿದಂತೆ ರಾಜ್ಯದ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು. ನಗರದ ಹಲವು ಕಡೆಗಳಲ್ಲಿ ನಕಲಿ ಮೈಸೂರು ಸಿಲ್ಕ್ ಸೀರೆಗಳು ಮಾರಾಟವಾಗುತ್ತಿದ್ದು, ಪ್ರವಾಸಿಗರಿಗೆ ಮೋಸ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಪ್ಪಿಸಲು ಮೈಸೂರು ಸಿಲ್ಕ್ ಸೇರಿದಂತೆ ಮೈಸೂರಿನ ಪ್ರತಿಯೊಂದು ಜಿಐ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಮಳಿಗೆ ತೆರೆಯಲಾಗುವುದು ಎಂದು ಹೇಳಿದರು.
ವಸ್ತು ಪ್ರದರ್ಶನ ಆವರಣ 80 ಎಕರೆ ವಿಸ್ತೀರ್ಣ ಹೊಂದಿದ್ದು, 80 ಎಕರೆ ಸುತ್ತ ಬೇಲಿ ನಿರ್ಮಾಣ ಮಾಡಲಾಗುವುದು. ಒಟ್ಟು 8 ಎಕರೆ ಪ್ರದೇಶದಲ್ಲಿ ‘ಸ್ವದೇಶಿ ದರ್ಶನ್’ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸಾಂಸ್ಕೃತಿಕ ಕೇಂದ್ರದ ಬಳಿಯಲ್ಲಿಯೇ ಶಾಪಿಂಗ್ ಮಳಿಗೆಗಳು, ಬಯಲು ರಂಗಮಂದಿರ, ಫುಡ್‌ಕೋರ್ಟ್ ನಿರ್ಮಾಣ ಮಾಡಲಾಗುವುದು. ಕುಸ್ತಿಯನ್ನು ಸಹ ಇಲ್ಲಿ ನಿರಂತರವಾಗಿ ಮಾಡುವ ಆಲೋಚನೆ ಇದೆ ಎಂದರು.
ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ 2 ಕಡೆಗಳಿಂದ ಪ್ರವೇಶ ದ್ವಾರ ಇದ್ದು, ಎಂಜಿ ರಸ್ತೆಯ ಬಳಿಯಲ್ಲಿರುವ ಜಾಗವನ್ನು ‘ಸ್ವದೇಶಿ ದರ್ಶನ್’ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುವುದು. ಇದು ಅತ್ಯುತ್ತಮ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ದೇಶದ ಅತ್ಯುತ್ತಮ ಸಾಂಸ್ಕೃತಿ ಕೇಂದ್ರಗಳ ಮಾದರಿಗಳನ್ನು ಅಧ್ಯಯನ ನಡೆಸಿ ನಂತರ ಡಿಪಿಆರ್ ತಯಾರಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಗೌಡ ಇದ್ದರು.