ಯುವಕರಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಕೆಲಸ

01-04-Shiva-2
ರಾಯಚೂರಿನ ಕರ್ನಾಟಕ ಸಂಘದಲ್ಲಿ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್‌ನಿಂದ ಹುತಾತ್ಮರ ದಿನಾಚರಣೆ ನಿಮಿತ್ತ ಭಾನುವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಬಿ.ಜಿ.ಹುಲಿ ಮಾತನಾಡಿದರು. ಹಿರಿಯ ಸಾಹಿತಿ ವೀರಹನುಮಾನ, ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಮಹೇಶ ಚಿಕಲಪರ್ವಿ, ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಹಯ್ಯಳಪ್ಪ, ಎಐಎಂಎಸ್‌ಎಸ್ ಜಿಲ್ಲಾ ಸಂಘಟಕಿ ಸರೋಜಾ ಗೋನ್ವಾರ್ ಇದ್ದರು.
Published on

ರಾಯಚೂರು: ಪ್ರಸ್ತುತ ದೇಶಾದ್ಯಂತ ಯುವಕರಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದ್ದು, ಯುವಕರಿಗೆ ವಿಷದ ಬದಲು ಅಮೃತವನ್ನು ಕೊಡುವ ಕೆಲಸವನ್ನು ಮಾಡಬೇಕಾದ ಅವಶ್ಯಕತೆಯಿದೆ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಜಿ.ಹುಲಿ ಹೇಳಿದರು.
ಸ್ಥಳೀಯ ಕರ್ನಾಟಕ ಸಂಘದಲ್ಲಿ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್‌ನಿಂದ ಹುತಾತ್ಮರ ದಿನಾಚರಣೆ ನಿಮಿತ್ತ ಭಾನುವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಸಾಂಸ್ಕೃತಿಕ ಅಧಃಪತನ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಡಲು ನಾನು ಇನ್ನೂ ಸ್ವಲ್ಪ ತಡವಾಗಿ ಹುಟ್ಟಬೇಕಿತ್ತು ಅನಿಸುತ್ತಿದೆ ಎಂದರು.
ಭಗತ್‌ಸಿಂಗ್‌ರನ್ನು ಬ್ರಿಟಿಷರು ಕುತಂತ್ರದಿಂದ 23ನೇ ವಯಸ್ಸಿಗೆ ಗಲ್ಲಿಗೇರಿಸಿದರು. ಇಂದು ಆಳುತ್ತಿರುವವರು ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ದೇಶದ ಅಮೂಲ್ಯ ಆಸ್ತಿಗಳಾದ ಯುವಕರನ್ನು ನೇಣಿಗೆ ಶರಣಾಗುವಂತಹ ಪರಿಸ್ಥಿತಿ ತಂದೊಡ್ಡಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ವೀರಹನುಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಗತ್‌ಸಿಂಗ್ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಅಪ್ರತಿಮ ಹೋರಾಟಗಾರರಾಗಿದ್ದು, ಇಂದಿನ ಯುವ ಪೀಳಿಗೆ ಅವರ ವಿಚಾರಧಾರೆಗಳನ್ನು ಮಾದರಿಯಾಗಿ ಪರಿಗಣಿಸಬೇಕಾಗಿದೆ.
ದೇಶದ ಜನರ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುವ ಅವಶ್ಯಕತೆಯಿದ್ದು, ಭಗತ್‌ಸಿಂಗ್ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯೊಂದಿಗೆ ಜನರು ಒಂದಾಗಬೇಕಿದೆ. ಆದರೆ ಪ್ರಗತಿಗೆ ಮಾರಕವಾದ ಘೋಷಣೆಗಳು ಇಂದು ಯುವಕರನ್ನು ದಾರಿತಪ್ಪಿಸುತ್ತಿವೆ ಎಂದರು.
ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಮಹೇಶ ಚಿಕಲಪರ್ವಿ ಮಾತನಾಡಿ, ಇಂದು ಮಕ್ಕಳು ಮೊಬೈಲ್, ಟಿವಿ ಗೀಳಿಗೆ ಬಲಿಯಾಗುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ದುರ್ಬಲರಾಗುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಕ್ರಾಂತಿಯ ಕಿಡಿ ಭಗತ್‌ಸಿಂಗ್ ನಾಟಕ, ನೃತ್ಯ ರೂಪಕ, ಗಾಯನ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಹಯ್ಯಳಪ್ಪ, ಎಐಎಂಎಸ್‌ಎಸ್ ಜಿಲ್ಲಾ ಸಂಘಟಕಿ ಸರೋಜಾ ಗೋನ್ವಾರ್, ಪದಾಕಾರಿಗಳಾದ ಬಸವರಾಜ್, ಪೀರ್‌ಸಾಬ್, ವಿನೋದಕುಮಾರ, ಪ್ರಮೋದ, ಯಲ್ಲಪ್ಪ, ವೌನೇಶ, ಹೇಮಂತ್, ಅಮೋಘ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net