ತುಳಿತಕ್ಕಾದವರ ನಡುವೆ ದ್ವೇಷ ಬಿತ್ತುವ ಕೆಲಸ

10-12-Shiva-2
Published on

ರಾಯಚೂರು: ಅನ್ಯಾಯ ಮತ್ತು ತುಳಿತಕ್ಕೊಳಗಾದವರು ಒಗ್ಗೂಡಿ ಹೋರಾಡಬಾರದು ಎನ್ನುವ ಕಾರಣಕ್ಕೆ ನಮ್ಮಲ್ಲಿಯೇ ದ್ವೇಷವನ್ನು ಬಿತ್ತುವ ಮೂಲಕ ಹೋರಾಟದ ಹಾದಿಯನ್ನು ತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಪ್ರಗತಿಪರ ಹೋರಾಟಗಾರ ಶಿವಸುಂದರ್ ಹೇಳಿದರು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ ನಿಮಿತ್ತ ದಸಂಸ ಮತ್ತು ಕರ್ನಾಟಕ ಜನಶಕ್ತಿಯಿಂದ ಪ್ರಚಲಿತ ವಿಚಾರಗಳ ಕುರಿತು ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ದ್ವೇಷ ಮತ್ತು ಜಾತಿ ಹೆಸರಿನಲ್ಲಿ ದೇಶವನ್ನು, ಜನರನ್ನು ಛೀದ್ರಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಭಾರತ ವಿಶ್ವದಲ್ಲಿಯೇ ದೊಡ್ಡ ಆರ್ಥಿಕತೆ ಹೊಂದಿರುವ 3ನೇ ದೇಶವಾಗಿದೆ. ಆದರೆ ಶ್ರೀಮಂತ ದೇಶದಲ್ಲಿ ಬಡವರೇ ಹೆಚ್ಚಿದ್ದಾರೆ. ದೇಶದಲ್ಲಿ 18 ಕೋಟಿ ಹೆಕ್ಟೇರ್ ಜಮೀನಿದೆ, ಪ್ರತಿಭಾವಂತ ಜನಾಂಗವಿದೆ, ವಿಶ್ವಗುರು ಆಗುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಸಂಪನ್ಮೂಲ ಮಾತ್ರ ಬೆರಳೆಣಿಯಷ್ಟು ಜನರಿಗೆ ಸಿಗುತ್ತಿದೆ.
ವಿಶ್ವದ 160 ದೇಶಗಳಲ್ಲಿ ಹಸಿವಿನಿಂದ ಸಾಯುತ್ತಿರುವವರ ಸಂಖ್ಯೆಯಲ್ಲಿ ಭಾರತ 145ನೇ ಸ್ಥಾನದಲ್ಲಿದೆ. ಕೋವಿಡ್ ಕಾಲದಲ್ಲಿ 6 ಕೋಟಿ ಜನರು ಮತ್ತಷ್ಟು ಬಡವರಾಗಿದ್ದರೆ, ಅದಾನಿ, ಅಂಬಾನಿ ಆದಾಯದಲ್ಲಿ ಮಾತ್ರ ಯಾವುದೇ ಕಡಿಮೆಯಾಗಲಿಲ್ಲ. ಅದಕ್ಕೆ ಆಳುವ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ನಿಂತಿರುವುದು ಕಾರಣವಾಗಿದೆ.
ಮೋದಿ ಪ್ರಧಾನಿಯಾದ ಮೇಲೆ ಮೀಸಲಾತಿ ಮೇಲೆ ದೊಡ್ಡ ಪ್ರಹಾರ ನಡೆಯುತ್ತಿದೆ. ಒಂದು ಕೋಟಿ ಉದ್ಯೋಗಗಳನ್ನು ಕಿತ್ತು ಹಾಕಿ ಮೀಸಲಾತಿಯಿಲ್ಲದ ಹೊರ ಗುತ್ತಿಗೆ ಪದ್ಧತಿಗೆ ಒಳಪಡಿಸಲಾಗಿದೆ. ಜಾತಿ ತಾರತಮ್ಯ ಡಿಜಿಟಲ್ ತಾರತಮ್ಯವಾಗಿ ಮಾರ್ಪಟ್ಟಿದ್ದು, ಮೇಲ್ವರ್ಗದ ಮಕ್ಕಳು ಎಲ್ಲ ಅಕಾರ ಪಡೆಯುತ್ತಿದ್ದು, ಬಡವರ ಮಕ್ಕಳು ಗುಲಾಮರಾಗಿ ಬಾಳುವಂತಾಗಿದೆ ಎಂದು ಶಿವಸುಂದರ್ ಹೇಳಿದರು.
ನಿವೃತ್ತ ಬ್ಯಾಂಕ್ ನೌಕರ ಎಂ.ನರಸಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಕಾರಿಗಳಾದ ಎಸ್.ಮಾರೆಪ್ಪ, ತಾಯಪ್ಪ ಭಂಡಾರಿ, ಖಾಜಾ ಅಸ್ಲಂ ಅಹ್ಮದ್, ಅನಿತಾ ಮಂತ್ರಿ, ಸಮೀರ್ ಪಾಷಾ, ಮಾರೆಪ್ಪ ಹರವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net