

ಹುನಗುಂದ: ಹಗಲು ರಾತ್ರಿ ಎನ್ನದೆ ಜನರ ಸುರಕ್ಷತೆಗಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಸೇನಾನಿಗಳ ಕಾರ್ಯ ಅತ್ಯಂತ ಗೌರವಯುತವಾಗಿದೆ ಎಂದು ಚಿತ್ತರಗಿ ಸಂಸ್ಥಾನಮಠದ ಇಳಕಲ್ಲನ ಗುರುಮಹಾಂತ ಸ್ವಾಮಿಗಳು ಹೇಳಿದರು.
ಪಟ್ಟಣದ ಓಂಶಾಂತಿ ನಗರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವತ್ತರಾದ ಸೈನಿಕ ಮಂಜುನಾಥ ಅಂಗಡಿ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುವ ಸೈನಿಕರ ನಿಸ್ವಾರ್ಥ ಸೇವೆಯನ್ನು ನಾವೆಲ್ಲರೂ ಗೌರವಿಸಬೇಕು. ಅವರ ಕುಟುಂಬಗಳಿಗೆ ಸಹಾಯ, ಸಹಕಾರ ಜತೆಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕೆಂದರು.
ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿ, ದೇಶಕ್ಕಾಗಿ ದುಡಿದು ಬೆವರು ಹರಿಸುವವರು ಸೈನಿಕರು ಮತ್ತು ರೈತರು. ರೈತನು ಹೊಲದಲ್ಲಿ ಬೆಳೆಯನ್ನು ಬೆಳೆಯದಿದ್ದರೆ ನಾವೆಲ್ಲರೂ ಉಪವಾಸ ಇರಬೇಕಾಗುತ್ತದೆ. ಸೈನಿಕರು ತಮ್ಮ ಜೀವ ಪಣಕ್ಕೆ ಇಟ್ಟು ದೇಶ ರಕ್ಷಣೆ ಮಾಡಿದಾಗ ಮಾತ್ರ ನಾವೆಲ್ಲರೂ ಸುಖದಿಂದ ಇರಲು ಸಾಧ್ಯ. ರೈತ ಮತ್ತು ಸೈನಿಕರು ಈ ದೇಶದ ಎರಡು ಕಣ್ಣುಗಳು ಎಂದರು.
ಮಾಜಿ ಸೈನಿಕ ಪರಪ್ಪ ಅಥಣಿ ಮಾತನಾಡಿ, ನಮ್ಮ ಸೈನಿಕರು ತಮ್ಮ ಜೀವ ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವುದರಿಂದ ದೇಶದ ಜನರು ಸಂತೋಷದಿಂದ ಬದುಕುತ್ತಿದ್ದಾರೆ. ಯುವಕರು ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದರು.
ಮಾಜಿ ಸೈನಿಕ ಶಿವಾನಂದ ನಿರ್ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಲಪ್ಪ ಕಿರಸೂರ, ನಾಗಪ್ಪ ಆಲೂರ, ಹುನಗುಂದ ಬಸ್ ಘಟಕದ ವ್ಯವಸ್ಥಾಪಕ ಅರವಿಂದ ಭಜಂತ್ರಿ, ವೀರನಾರಿಯರ ಜಿಲ್ಲಾಧ್ಯಕ್ಷ ಗಂಗಮ್ಮ ಬಾರಕೇರ, ಗಂಗಮ್ಮ ಕಡಪಟ್ಟಿ, ಶಂಕ್ರಮ್ಮ ವಾಲಿಕಾರ, ವಿಜಯ ದಳವಾಯಿ, ಸಂಗನಬಸಪ್ಪ ಹುಲ್ಯಾಳ, ಎಂ.ಬಿ.ಗೌಡರ ಇತರರು ಇದ್ದರು.