

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಂಸ್ಕೃತಿಕ ಮತ್ತು ಚಾರಿತ್ರಿಕ ಮಹತ್ವ ಹೊಂದಿದ ಕರ್ನಾಟಕ ವಿದ್ಯಾವರ್ಧಕ ಸಂಘ ಪುಸ್ತಕಗಳ ಪ್ರಕಟಣೆ ಮೂಲಕ ನಾಡಿನ ಚರಿತ್ರೆ ದಾಖಲಿಸುತ್ತಿದೆ. ಆಡಿದ ಮಾತುಗಳು ಗಾಳಿಯಲ್ಲಿ ತೇಲಿ ಹೋಗುತ್ತವೆ. ಅದೇ ಮಾತುಗಳನ್ನು ಕೃತಿ ರೂಪದಲ್ಲಿ ಪ್ರಕಟಿಸಿ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಶಾಂತಿನಾಥ ದಿಬ್ಬದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಆರ್.ಎಚ್. ಗೂಡವಾಲಾ ದತ್ತಿ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರೊ. ಧನವಂತ ಹಾಜವಗೋಳ ಮತ್ತು ಡಾ. ಚಿದಾನಂದ ಮಾಸನಕಟ್ಟಿ ಸಂಪಾದಿಸಿದ ಕನ್ನಡ ರಂಗ ಚಿಂತನೆ ಹಾಗೂ ಡಾ. ಬಾಳಪ್ಪ ಚಿನಗುಡಿ ಸಂಪಾದಿಸಿದ ಜನಪದ ಜಂಗಮ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಒಂದು ಕೃತಿಯಲ್ಲಿ ಕನ್ನಡ ಕಲಾ ಪ್ರಕಾರವಾದ ನಾಟಕದ ಚರಿತ್ರೆ, ಇನ್ನೊಂದರಲ್ಲಿ ಶ್ರೇಷ್ಠ ಕಲಾವಿದ ಬಸವಲಿಂಗಯ್ಯ ಹಿರೇಮಠರ ಚರಿತ್ರೆ ಕಟ್ಟಿಕೊಟ್ಟಿದೆ ಎಂದರು.
ಡಾ. ನಿಂಗಪ್ಪ ಮುದೇನೂರ ಮಾತನಾಡಿ, ಜನಾಶ್ರಯದಲ್ಲಿ ಮೌಖಿಕ ಪರಂಪರೆಯಲ್ಲಿ ಸಾಗಿ ಬಂದ ಬಯಲಾಟ, ಸಣ್ಣಾಟ, ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಆಧುನಿಕ ರಂಗಭೂಮಿ ಕುರಿತ ವಿದ್ವತ್ಪೂರ್ಣ ಲೇಖನಗಳನ್ನೊಳಗೊಂಡು ಸೊಗಸಾಗಿ ಮೂಡಿಬಂದ ಕೃತಿ ಎಂದರು.
ಪತ್ರಕರ್ತ ಡಾ. ಬಸವರಾಜ ಹೊಂಗಲ ಮಾತನಾಡಿದರು.
ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ, ಡಾ. ಸಂಗಮೇಶ ಚಲವಾದಿ, ಎಂ.ಎಂ. ಚಿಕ್ಕಮಠ, ಸಿ.ಎಸ್. ಪಾಟೀಲ, ಶಾಂತವೀರ ಬೆಟಗೇರಿ, ಸಿದ್ದರಾಮ ಬೆಟಗೇರಿ, ಮಹಾಂತೇಶ ನರೇಗಲ್, ಇತರರು ಇದ್ದರು.