

ಅಣ್ಣಿಗೇರಿ: ಮಳೆ, ಗಾಳಿ ಹಾಗೂ ಚಳಿ ಎನ್ನದೇ ಪ್ರತಿದಿನ ಬೆಳಗ್ಗೆ ಮನೆ ಮನೆಗೆ ತೆರಳಿ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಸಿದ್ಧಾರೂಢ ಆಲದಕಟ್ಟಿ ಹೇಳಿದರು.
ಸ್ಥಳೀಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪತ್ರಿಕೆ ವಿತರಣೆ ಸಂದರ್ಭದಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿದರೂ ವಿತರಕರು ಜವಾಬ್ದಾರಿಯಿಂದ ತಮ್ಮ ಕಾಯಕವನ್ನು ನಿರ್ವಹಿಸುತ್ತಾರೆ. ಇದರಿಂದಲೇ ಜನರು ಕಣ್ಣು ತೆರೆಯುವುದರೊಳಗೆ ಪತ್ರಿಕೆ ಅವರ ಕೈಲಿರುತ್ತದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ನಿಂಗಪ್ಪ ಯಳವತ್ತಿ ಮಾತನಾಡಿ, ಪತ್ರಿಕಾ ವಿತರಕರು ಸಾಕಷ್ಟು ನೋವುಗಳನ್ನು ಅನುಭವಿಸುತ್ತ ಕಾರ್ಯೋನ್ಮುಖರಾಗಿದ್ದಾರೆ. ಪತ್ರಿಕೆ ವಿತರಿಸುವ ಸಂದರ್ಭದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ಸರ್ಕಾರ ಕೂಡಲೇ ಎಚ್ಚೆತ್ತು ಅವರ ಕುಟುಂಬಕ್ಕೆ ಪರಿಹಾರ ನೀಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಬಸವರಾಜ ಕುಬಸದ ಮಾತನಾಡಿದರು. ಎಲ್ಲ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.. ಸ್ಥಳೀಯ ಠಾಣಾಧಿಕಾರಿ ಸಿದ್ಧಾರೂಢ ಆಲದಕಟ್ಟಿ ಹಾಗೂ ಮಾಜಿ ಅಧ್ಯಕ್ಷ ನಿಂಗಪ್ಪ ಯಳವತ್ತಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಿಕಾ ವಿತರಕರಾದ ರಮೇಶ ಬಕ್ಕಸದ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಈರಪ್ಪ ಗುರಿಕಾರ, ಅರುಣಕುಮಾರ ಹೂಗಾರ, ಬುಡ್ಡಾ ಬೆಟಗೇರಿ, ಮಹಾಂತೇಶ ನಾವಳ್ಳಿ, ಜಗದೀಶ ಗಾಣಿಗೇರ, ರಾಜು ಮನ್ನಣ್ಣವರ, ರಫೀಕ್ ಕಲೆಗಾರ, ಇತರರು ಉಪಸ್ಥಿತರಿದ್ದರು.