ತೆವಳುತ್ತಿದೆ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ

hebbala flyover
Published on

ಆರ್​​.ತುಳಸಿಕುಮಾರ್​​

ಬೆಂಗಳೂರು

ಮಹಾನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳಲು ಪ್ರಮುಖ ಸಂಪರ್ಕ ಮಾರ್ಗವಾಗಿರುವ ಹೆಬ್ಬಾಳ ಮೇಲುರಸ್ತೆಯ ವಿಸ್ತರಣೆ ಯೋಜನೆಯು ಅಮೆ ವೇಗದಲ್ಲಿ ನಡೆದಿದೆ. ಟ್ರಾಫಿಕ್ ಜಾಮ್‌ನಿಂದ ಪರಿಹಾರ ಕಂಡುಕೊಳ್ಳಲು ಎರಡು ವರ್ಷದ ಹಿಂದೆ ಆರಂಭವಾದ ಕಾಮಗಾರಿ ತೆವಳುತ್ತಾ ಸಾಗುತ್ತಿದ್ದು, ವಾಹನ ಸವಾರರು ಹೈರಾಣರಾಗುತ್ತಿದ್ದಾರೆ. ಇದೇ ವೇಗದಲ್ಲಿ ಕೆಲಸ ಸಾಗಿದರೆ ಯೋಜನೆ ಪೂರ್ಣಗೊಳ್ಳುವುದೆಂದು ಎಂದು ಸಾರ್ವಜನಿಕರು ಪ್ರಶ್ನಿಸತೊಡಗಿದ್ದಾರೆ.

ಏರ್‌ಪೋರ್ಟ್ ರಸ್ತೆಯಲ್ಲಿ ದಿನೇ ದಿನೆ ವಾಹನ ಸಂಚಾರ ಹೆಚ್ಚಳವಾಗುತ್ತಿದೆ. ಇದಕ್ಕೆ ತಕ್ಕಂತೆ ರಸ್ತೆ ಸೌಲಭ್ಯವನ್ನು ಮೇಲ್ದರ್ಜೆಗೇರಿಸುವ ಕೆಲಸ ಸಾಗಿಲ್ಲ. ಹೆಬ್ಬಾಳದ ಹಾಲಿ ಮೇಲ್ಸೇತುವೆ ಎರಡೂ ದಿಕ್ಕಿನಲ್ಲಿ ತಲಾ 2 ಪಥ ಇರುವುದರಿಂದ ಸಮಸ್ಯೆಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹೆಚ್ಚುವರಿ ಪಥ ಕಲ್ಪಿಸಲು ಬಿಡಿಎ ಯೋಜನೆ ರೂಪಿಸಿ ಕಾಮಗಾರಿ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ವಹಿಸಿದೆ. ಆದರೆ, ಕಾಮಗಾರಿ ಆರಂಭಗೊಂಡು ಎರಡು ವರ್ಷ ಪೂರ್ಣಗೊಂಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಸಾಗಿಲ್ಲ. ಆರಂಭದಲ್ಲಿ ಒಂದು ಬದಿಯಲ್ಲಿ ಮಾತ್ರ ಕಾಮಗಾರಿ ಕೈಗೊಳ್ಳಲಾಗಿತ್ತು. ಬಳಿಕ ಕಾರ್ಮಿಕರ ಕೊರತೆ, ಮಳೆ ಸಮಸ್ಯೆ ಮುಂದೊಡ್ಡಲಾಗಿತ್ತು. ನಂತರ ಕೆ.ಆರ್.ಪುರ ಕಡೆಯಿಂದ ನಗರದತ್ತ ಸಾಗುವ ಮಾರ್ಗದಲ್ಲಿ ಪಿಲ್ಲರ್, ಗರ್ಡರ್ ಅಳವಡಿಕೆ ಕುಂಟುತ್ತಾ ಸಾಗಿತ್ತು. ಇದರ ಜತೆಯಲ್ಲೇ ಏರ್‌ಪೋರ್ಟ್ ಮೆಟ್ರೋ ಮಾರ್ಗದ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂದು ಕೆಲ ತಿಂಗಳು ಮೇಲ್ಸೇತುವೆ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕಾಮಗಾರಿಗೆ ಸಂಚಾರ ಪೊಲೀಸರು ಪೂರ್ಣವಾಗಿ ಅನುಮತಿ ನೀಡುತ್ತಿಲ್ಲ ಎಂಬ ಸಬೂಬು ನೀಡಲಾಗುತ್ತಿದೆ.

ಮೇಲ್ವಿಚಾರಣೆಯಲ್ಲಿ ಬಿಡಿಎ ವಿಫಲ:

ಮೇಲ್ಸೇತುವೆ ವಿಸ್ತರಣೆ ಕಾಮಗಾರಿಯನ್ನು ಖಾಸಗಿ ಕಂಪನಿ ವಹಿಸಿದ್ದರೂ, ಅದರ ಮೇಲ್ಚಿಚಾರಣೆ ಹೊಣೆ ಬಿಡಿಎ ಹೊಂದಿದೆ. ಕಾಮಗಾರಿ ನಿಧಾನವಾಗಿರುವುದಕ್ಕೆ ಡಿಸಿಎಂ, ಮುಖ್ಯ ಕಾರ್ಯದರ್ಶಿ ಆಕ್ಷೇಪಿಸಿದ್ದರೂ ಬಿಡಿಎ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಹುಡುಕಡೆ ಗುತ್ತಿಗೆ ಕಂಪನಿಯತ್ತ ಬೊಟ್ಟು ಮಾಡುತ್ತಿದೆ. ಎರಡೂ ಬದಿಯಿಂದ ಕಾಮಗಾರಿ ಆರಂಭಿಸಲು ಅವಕಾಶ ಇದ್ದರೂ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ರಾತ್ರಿ ವೇಳೆ ಕಾಮಗಾರಿ ನಡೆಸಲು ಆದ್ಯತೆ ನೀಡುತ್ತಿಲ್ಲ. ಇದರ ಪರಿಣಾಮ ಗಡುವಿನೊಳಗೆ ಕೆಲಸ ಪೂರ್ಣಗೊಳಿಸಲಾಗುತ್ತಿಲ್ಲ. ಎಸ್ಟೀಮ್ ಮಾಲ್​​ ಕಡೆಯಿಂದ ನಗರದತ್ತ ಸಾಗಲು ಹೆಚ್ಚುವರಿ ಪಥ ನಿರ್ಮಾಣದ ಕಾಮಗಾರಿಗೆ ಇನ್ನೂ ಚಾಲನೆ ನೀಡದಿರುವುದು ಒಟ್ಟಾರೆ ಯೋಜನೆ ಮತ್ತಷ್ಟು ಸಮಯ ವಿಳಂಬವಾಗಲಿದೆ. ಈ ಸಂಗತಿಯನ್ನು ಅರ್ಥೈಸಿಕೊಳ್ಳದ ಬಿಡಿಎ ಅಧಿಕಾರಿಗಲು ಸ್ಥಳೀಯ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪೊಲೀಸ್ ವಿಭಾಗದೊಂದಿಗೆ ಸಮನ್ವಯ ಸಾಧಿಸದಿರುವುದು ಟ್ರಾಫಿಕ್ ಜಾಮ್‌ಗೆ ಅವಕಾಶವಾಗಿದೆ ಎನ್ನುತ್ತಾರೆ ಸ್ಥಳೀಯರು.

ಏರೋ ಇಂಡಿಯಾಗೆ ಟ್ರಾಫಿಕ್ ಬಿಸಿ!:

ಮುಂದಿನ ಫೆ.10ರಿಂದ ಯಲಹಂಕದ ವಾಯುಪಡೆ ಕೇಂದ್ರದಲ್ಲಿ ಜಾಗತಿಕ ವೈಮಾನಿಕ ಮೇಳ ‘ಏರೋ ಇಂಡಿಯಾ’ ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕೆ ಐದೂ ದಿನವೂ ಲಕ್ಷಾಂತರ ಜನರು ಹೆಬ್ಬಾಳದ ಮೂಲಕವೇ ಹಾದುಹೋಗಬೇಕಿದೆ. ಹಿಂದಿನ ಮೇಳಗಳನ್ನು ಗಮನಿಸಿದರೆ ಹೆಬ್ಬಾಳ ಜಂಕ್ಷನ್‌ನಲ್ಲಿ ಬೆಳಗ್ಗಿನಿಂದ ರಾತ್ರಿವರೆಗೂ ಟ್ರಾಫಿಕ್ ವ್ಯತ್ಯಯ ಕಂಡುಬಂದಿತ್ತು. ಈಗಲೂ ರಸ್ತೆ ಸೌಲಭ್ಯ ಹೆಚ್ಚಳಗೊಳ್ಳದ ಕಾರಣ ಪರಿಸ್ಥಿತಿ ಬದಲಾಗಿಲ್ಲ. ಭಾರೀ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಿದ್ದರೂ, ಗಣ್ಯರು ಸೇರಿ ಸಾರ್ವಜನಿಕರ ವಾಹನಗಳು ಮೇಲ್ಸೇತುವೆಯಲ್ಲಿ ಸರಾಗವಾಗಿ ಸಾಗಲು ಸಾಧ್ಯವಾಗದು. ಈಗ ಮೆಟ್ರೋ ಸಹಿತ ಫ್ಲೈಓವರ್ ಕಾಮಗಾರಿ ಒಟ್ಟಿಗೆ ನಡೆಯುತ್ತಿರುವುದರಿಂದ ಮೇಳದ ದಿನಗಳಂದು ಕೆಲಸ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ದಶಕದಿಂದಲೂ ಕಾಡುತ್ತಿರುವ ಈ ಸಮಸ್ಯೆಗೆ ಸರ್ಕಾರ ಕೂಡ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ರಾಂಪ್ ಜೋಡಣೆ ಅವೈಜ್ಞಾನಿಕ?:

ಕೆ.ಆರ್.ಪುರದಿಂದ ನಗರದತ್ತ ಸಾಗಲು ಇದ್ದ ಹಳೆಯ ರಾಂಪ್‌ ಕೆಡವಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಪಿಲ್ಲರ್‌ಗಳನ್ನು ನಿರ್ಮಿಸಿದ್ದು ಗರ್ಡರ್ ಇನ್ನಷ್ಟೇ ಅಳವಡಿಸಬೇಕಿದೆ. ಕಾಮಗಾರಿ ನಿಧಾನವಾಗಿರುವ ಕಾರಣ ಹಳೆಯ ರಾಂಪ್‌ನ ಆರಂಭದ 200 ಮೀ. ಉದ್ದದಷ್ಟು ಹಾಗೆಯೇ ಉಳಿಸಿಕೊಳ್ಳಲು ಬಿಡಿಎ ಇತ್ತೀಚಿಗೆ ನಿರ್ಧರಿಸಿದೆ. ಆದರೆ, 25 ವರ್ಷದಷ್ಟು ಹಳತಾದ ರಾಂಪ್ ಭಾಗಕ್ಕೆ ಹೊಸದಾಗಿ ನಿರ್ಮಿಸುವ ರಾಂಪ್ ಜೋಡಣೆ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ. ಕೇವಲ 200 ಮೀ. ಉದ್ದದಷ್ಟು ಭಾಗವನ್ನು ಪುನರ್ ನಿರ್ಮಿಸಲು ಸಮಯ ಸಿಗುತ್ತಿಲ್ಲವೆಂದು ನೆಪವೊಡ್ಡಿ ಇಂತಹ ಅವೈಜ್ಞಾನಿಕ ಕ್ರಮಕ್ಕೆ ಬಿಡಿಎ ಇಂಜಿನಿಯರ್‌ಗಳ ನಡೆ ಚರ್ಚೆಗೆ ಗ್ರಾಸ ಒದಗಿಸಿದೆ.

ದಿನೇ ದಿನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರು ಭಾರೀ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಏರ್‌ಪೋರ್ಟ್‌ಗೆ ತೆರಳುವವರು ಸರ್ಕಾರಕ್ಕೆ ಹಿಡಿಶಾಪ ಹಾಕಿಯೇ ತೆರಳುತ್ತಿದ್ದಾರೆ. ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಇಚ್ಛಾಶಕ್ತಿ ಪ್ರದರ್ಶಿಸದ ಕಾರಣ ಕೆಲಸ ನಿಧಾನಗೊಂಡಿದೆ. ಹೆಚ್ಚು ಕಾರ್ಮಿಕರನ್ನು ಬಳಸಿ ಕಾಮಗಾರಿ ಪೂರ್ಣಗೊಳಿಸಲಿ.

- ಸಿ.ಮುನಿಕೃಷ್ಣ, ಮಾಜಿ ಕಾರ್ಪೊರೇಟರ್, ಹೆಬ್ಬಾಳ

ಪೀಕ್ ಅವರ್‌ನಲ್ಲಿ ತುರ್ತಾಗಿ ತೆರಳಬೇಕಾದರೆ ಜೀವ ಹೋದ ಸ್ಥಿತಿ ಉಂಟಾಗುತ್ತದೆ. ಆಂಬುಲೆನ್ಸ್ ವಾಹನಗಳು ಕೂಡ ಟ್ರಾಫಿಕ್‌ನಲ್ಲಿ ಸಿಲುಕುವುದು ಸಾಮಾನ್ಯವಾಗಿಬಿಟ್ಟಿದೆ. ಅಧಿಕಾರಸ್ಥರು, ಅಧಿಕಾರಿಗಳಿಗೆ ಜನರ ಬವಣೆ ಅರ್ಥವಾದಂತಿಲ್ಲ. ಸಬೂಬು ಹೇಳದೆ ಬೇಗನೆ ಕಾಮಗಾರಿ ಮುಗಿಸಲು ಗುತ್ತಿಗೆದಾರರ ಮೇಲೆ ಜನಪ್ರತಿನಿಧಿಗಳು ಒತ್ತಡ ಹೇರಲಿ.

- ಕೆ.ವೆಂಕಟೇಶ್, ಸ್ಥಳೀಯ ಮುಖಂಡ, ಅಮೃತಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net