

ಮದ್ದೂರು: ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯೂ ಐದು ದಶಕಗಳಿಂದಲೂ ಗ್ರಾಮೀಣ ಭಾಗದ ಮಕ್ಕಳಿಗೆ ಅಕ್ಷರ ದಾಸೋಹದ ಮೂಲಕ ಜ್ಞಾನಾರ್ಜನೆ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್‌ನ ಸದಸ್ಯ ಕೆ.ವಿವೇಕಾನಂದ ಹೇಳಿದರು.
ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ 2024-25ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪಟ್ಟಣ ಸೇರಿದಂತೆ ಹಳ್ಳಿಗಾಡಿನ ಲಕ್ಷಾಂತರ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿಯುವ ಜತೆಗೆ ಸಮಾಜದಲ್ಲಿ ಹತ್ತು ಹಲವು ಹುದ್ದೆಗಳನ್ನು ಅಲಂಕರಿಸಿ ದೇಶ ವಿದೇಶಗಳಲ್ಲಿಯೂ ನೆಲೆ ನಿಂತಿರುವುದಾಗಿ ಶ್ಲಾಘಿಸಿದರು.
ಎಚ್.ಕೆ.ವೀರಣ್ಣಗೌಡರ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಬದುಕು ಹಸನಾಗಲೆಂದು ಮತ್ತು ಶಿಕ್ಷಣದ ಜತೆಯಲ್ಲಿಯೇ ಶಿಸ್ತು, ಗುರಿ, ಸಾಧನೆ ಮತ್ತು ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಮುನ್ನಡೆದರೆ ತಾವು ಕಂಡ ಕನಸನ್ನು ನನಸು ಮಾಡಬಹುದಾಗಿದೆ ಎಂದರು.
ಶ್ರೀ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಟಿ.ಎಂ.ರಕ್ಷಿತ್‌ರಾಜ್ ‘ವಿದ್ಯಾರ್ಥಿಗಳು ಅಂದು-ಇಂದು’ ಎಂಬ ವಿಷಯ ಕುರಿತು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಅವರ ಮುಂದಿನ ಭವಿಷ್ಯಕ್ಕೆ ಪೂರಕವಾಗುವ ಬದಲು ಮಾರಕವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಆ ಸಮಯವನ್ನು ಪುಸ್ತಕಗಳ ಬಗ್ಗೆ ಅಧ್ಯಯನ ಮಾಡಲು ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ದೇಶಕ್ಕಾಗಿ ಹೋರಾಟ ಮಾಡಿದ ಹಲವು ಮಹನೀಯರ ತ್ಯಾಗ ಬಲಿದಾನಗಳ ಪುಸ್ತಕಗಳ ಬಗ್ಗೆ ಹೆಚ್ಚು ಅಭ್ಯಾಸ ಮಾಡುವುದರ ಮೂಲಕ ಅವರ ಗುಣ ನಡತೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ಬಹುಮಾನ ವಿತರಣೆ: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಅಪೂರ್ವಚಂದ್ರ ಬಹುಮಾನ ವಿತಿರಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು, ಪ್ರಾಂಶುಪಾಲ ಪ್ರೊ.ಪ್ರಕಾಶ್, ಸುರೇಂದ್ರ, ಕನ್ನಡ ಸಂಘದ ಕಾರ್ಯದರ್ಶಿ ಡಾ.ಕಿರಣ್, ಅಭಿಲಾಷ, ಎ.ವಿ.ಪ್ರದೀಪ್ ಇತರರಿದ್ದರು.