

ಪಾಂಡವಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲಿ ್ಸಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ತಾಲೂಕಿನ ಪ್ರತಿ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳಿಗೆ ತಾಲೂಕಿನ ಜಯಂತಿನಗರದ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ ಶನಿವಾರ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮುರಾರ್ಜಿ ದೇಸಾಯಿ, ಆದರ್ಶ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್ ವಸತಿ ಶಾಲೆಗಳು ಸೇರಿದಂತೆ ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 48 ಪ್ರೌಢಶಾಲೆಗಳಲ್ಲಿನ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಒಟ್ಟು 144 ವಿದ್ಯಾರ್ಥಿಗಳಿಗೆ ದಿ.ಎ.ಎನ್.ಮಾಯಣ್ಣೇಗೌಡ, ಕೆ.ಆರ್.ಪುಟ್ಟೇಗೌಡ ಹಾಗೂ ತೊಟ್ಟಿಲು ಪುಟ್ಟೇಗೌಡ ಹುಲಿವಾನ ಅವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕಿನ ವಿವಿಧ ಶಾಲೆಗಳಿಂದ ಪಾಲಕರೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ವ್ಯಾಸಂಗ ಮಾಡಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕ ಗಳಿಸಿರುವ ವಿದ್ಯಾರ್ಥಿಗಳಾದ ಎಂ.ಕೀರ್ತನಾ (92.33), ವೈ.ಪಿ.ದರ್ಶಿನಿ (88), ತನ್ಮಯಿ (88), ಪ್ರಿಯಾ (86.33), ಡಿ.ಆರ್.ರಕ್ಷಿತಾ (86) ಅವರಿಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಪಂಚಲಿಂಗೇಗೌಡ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಒಂದಿಲ್ಲೊಂದು ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಜತೆಗೆ ಗೇಮ್ಸ್, ಅಥ್ಲೆಟಿಕ್ಸ್, ಮ್ಯಾರಥಾನ್, ಗುಡ್ಡಗಾಡು ಓಟ, ಚರ್ಚಾ ಸ್ಪರ್ಧೆ ಇತರ ಚಟುವಟಿಕೆಗಳನ್ನೂ ನಡೆಸುತ್ತಿದೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಮಹದೇವಪ್ಪ ಮಾತನಾಡಿ, ಹಿಂದಿನ ಎಲ್ಲ ವರ್ಷಗಳಿಗಿಂತ ಈ ವರ್ಷದ ಪರೀಕ್ಷೆ ಕ್ಲಿಷ್ಟಕರವಾಗಿದ್ದು, ವಿದ್ಯಾರ್ಥಿಗಳು ನೈಜವಾಗಿ ಪರೀಕ್ಷೆ ಎದುರಿಸಿದ್ದಾರೆ. ಪರಿಶ್ರಮ ಮತ್ತು ಧೈರ್ಯವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾಧಕರಿಗೆ ಧೈರ್ಯ, ಹಂಬಲ ಮತ್ತು ತವಕ ಅವಶ್ಯಕ. ಮೊಬೈಲ್ ಹಾವಳಿಯಿಂದ ಮಕ್ಕಳು ಒಳ್ಳೆಯದಕ್ಕಿಂತ ಕೆಟ್ಟದನ್ನು ಅವಲಂಬಿಸುವುದು ಹೆಚ್ಚಾಗಿದೆ. ಮಕ್ಕಳು ಓದಿನ ಜತೆಗೆ ಸಂಸ್ಕಾರವನ್ನೂ ಕಲಿಯಬೇಕು. ಬದುಕನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಸಂಸ್ಕಾರ ಹಾಳಾಗುತ್ತಿದೆ. ಈ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿ ಹೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೊನ್ನರಾಜು, ಸಂಘಟನಾ ಕಾರ್ಯದರ್ಶಿ ಆರ್.ವಿ.ಸೌಮ್ಯಾ, ಆಡಳಿತಾಧಿಕಾರಿ ಪಿ.ಅಕ್ಷಯ್, ಶಶಿ, ರಾಜುಗೌಡ, ಡಿಎಂಎಸ್ ಜ್ಞಾನ ಕುಟೀರ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಜಗದೀಶ್, ಕೆ.ಆರ್.ಮೋಹನ್‌ರಾಜು ಇತರರು ಇದ್ದರು.