

ಉಪ್ಪಿನಬೆಟಗೇರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅದು ಸಾರ್ವಜನಿಕರಿಗೆ ತೃಪ್ತಿ ತರಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ ಎಂದು ಯಾದವಾಡ ಸಿದ್ಧಾರೂಢ ಆಶ್ರಮದ ಆನಂದ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಸಮೀಪದ ಯಾದವಾಡ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ‘ನಮ್ಮೂರು ನಮ್ಮ ಕೆರೆ’ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಜ್ಯದ ಉದ್ದಗಲಕ್ಕೂ ವಿಸ್ತರಣೆಗೊಂಡ ಧರ್ಮಸ್ಥಳ ಸಂಘದ ಕಾರ್ಯಗಳು ಮಹಿಳೆಯರಿಗೆ ಆಪತ್ಕಾಲದ ಬಂಧುವಾಗಿ ಕೆಲಸ ನಿರ್ವಹಿಸುತ್ತಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜನ ಮತ್ತು ಜಾನುವಾರು, ಪಕ್ಷಿಗಳಿಗೆ ಅನುಕೂಲವಾಗಲಿ ಎಂದು ರಾಜ್ಯಾದ್ಯಂತ ಸಾಕಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅವರ ಈ ಸಾಮಾಜಿಕ ಕಳಕಳಿಯನ್ನು ಅರಿತು ನಾವೆಲ್ಲರೂ ಕೆರೆಯನ್ನು ಸ್ವಚ್ಛಂದವಾಗಿಟ್ಟುಕೊಳ್ಳಬೇಕು ಎಂದರು.
ತಾಲೂಕಾ ಯೋಜನಾಧಿಕಾರಿ ಅಶೋಕ ಕೆ. ಮಾತನಾಡಿ, ಯಾದವಾಡ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದು, ಇಂದು ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ಗ್ರಾಪಂ. ನಿರ್ವಹಿಸಲಿದೆ ಎಂದರು.
ಪಿಡಿಒ ಆರ್.ಜಿ. ಚಲವಾದಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಜೀವ ಜಲ ಉಳಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಈ ಕೆರೆಯ ಅಳತೆ ಮಾಡಿಸಿ ತಂತಿ ಬೇಲಿ ಹಾಕಲಾಗುವುದು. ಸುತ್ತಲೂ ಕಲ್ಲಿನ ಪಿಚ್ಚಿಂಗ್ ಮಾಡಿ ಗಿಡಗಳನ್ನು ನೆಟ್ಟು ಸುಂದರ ತಾಣ ಮಾಡಲಾಗುವುದು ಎಂದರು.
ಇಂಜಿನಿಯರ್ ನಿಂಗರಾಜ ಮಾಳವಾಡ ಮಾತನಾಡಿ, ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಅಭಿವೃದ್ಧಿಪಡಿಸಿದ 540ನೇ ಕೆರೆ ಇದಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಗಂಗಪ್ಪ ಮುಮ್ಮಿಗಟ್ಟಿ, ಮಡಿವಾಳಪ್ಪ ದಿಂಡಲಕೊಪ್ಪ, ಶಿವಾನಂದ ಬೆಂಡಿಗೇರಿ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ಹುಲಮನಿ, ಕೆರೆ ಅಭಿವೃದ್ಧಿ ಅಧ್ಯಕ್ಷ ಮಹಾಂತೇಶ ಗಳಗಿ, ಉಪಾಧ್ಯಕ್ಷ ಮಾಬೂಸಬಾನಿ ಬೆಟಗೇರಿ, ಆನಂದ ಕೇಶಗೊಂಡ, ಶೇಖಪ್ಪ ಕುಂಬಾರ, ಪಾರಮ್ಮ ಹಿರೇಮಠ, ಮುತ್ತು ಹಿರೇಮಠ, ಜ್ಯೋತಿ ಬೆಂಡಿಗೇರಿ, ಲಕ್ಷ್ಮೀ ತೋಟಗೇರ, ಮಂಜುನಾಥ ಬಂಡೆಪ್ಪನವರ, ಮಹಿಳಾ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಚನಬಸಪ್ಪ ಕಳ್ಳಿಮನಿ, ವಿವೇಕ ಹಾತರಕಿ, ಶಂಕ್ರಯ್ಯ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.