ಅಪ ಪ್ರಚಾರ ಮಾಡುವುದೇ ಕಾಂಗ್ರೆಸ್ ಕೆಲಸ

08 HANUR 1
ಹನೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಶ್ಯಾಮಾ ಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸಿದರು. ನಿರಂಜನ್‌ಕುಮಾರ್, ಎಸ್.ಬಾಲರಾಜು, ಡಾ.ಎಸ್. ದತ್ತೇಶ್‌ಕುಮಾರ್ ಇತರರು ಇದ್ದರು.
Published on

ಹನೂರು : ಕಾಂಗ್ರೆಸ್ಸಿಗರಿಗೆ ಅಪ ಪ್ರಚಾರ ಮಾಡುವುದೇ ಒಂದು ಕೆಲಸ. ಆದರೆ ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಯೋಚನೆ ಮಾಡಲಿಲ್ಲ. ಇದರಿಂದ ಪಕ್ಷದ ಅಭ್ಯರ್ಥಿ ಸೋಲಬೇಕಾಯಿತು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ವಾಸವಿ ಮಹಲ್‌ನಲ್ಲಿ ಸೋಮವಾರ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಶ್ಯಾಮಾ ಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಅಪ ಪ್ರಚಾರವನ್ನು ಮಾಡಿ ಜನರನ್ನು ದಿಕ್ಕು ತಪ್ಪಿಸಿದ್ದರು. ಇತ್ತ ಕಾಂಗ್ರೆಸ್ ಕಾರ್ಯಕರ್ತರು ತಪ್ಪು ಮಾಡುತ್ತಿದ್ದೆಂದು ಎಂದೆನಿಸದೆ ಸುಳ್ಳನ್ನು ಸತ್ಯವಾಗಿ ಹೇಳಿ ಜನರನ್ನು ನಂಬಿಸಿದರು. ಆದರೆ ಜನರು ಈ ಬಗ್ಗೆ ಪರಿಶೀಲಿಸದೆಯೇ ಇದನ್ನು ಬಲವಾಗಿ ನಂಬಿದರು. ಹಾಗಾಗಿ ದೇಶದಲ್ಲಿ ಚಾ.ನಗರ ಒಳಗೊಂಡಂತೆ ಇನ್ನಿತರೆಡೆ ಎಸ್ಸಿ ಸಮುದಾಯದ ಜನರು ಬಿಜೆಪಿ ಪರ ನಿಲ್ಲಲು ಸಾಧ್ಯವಿಲ್ಲದಾಯಿತು. ಈ ಕಾರಣದಿಂದ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಿದರು. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸುಳ್ಳನ್ನು ನಂಬಿಕೊಳ್ಳುವ ಮನಸ್ಥಿತಿ ಬದಲಾಯಿಸಿಕೊಳ್ಳಬೇಕಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸಂಘಟಿಸುವುದರತ್ತ ಗಮನಹರಿಸಬೇಕಿದೆ ಎಂದು ತಿಳಿಸಿದರು.

ಎಸ್ಸಿ, ಎಸ್ಟಿ ಹಣ ಗ್ಯಾರಂಟಿಗೆ: ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ಸಿಗರು ಅಪ ಪ್ರಚಾರ ಮಾಡಿದರು. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕಳೆದ ಬಾರಿ 11,144 ಕೋಟಿ ರೂ. ಹಾಗೂ ಈ ಸಾಲಿನಲ್ಲಿ 14,560 ಕೋಟಿ ರೂ. ಎಸ್ಸಿ, ಎಸ್ಟಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಜನರಿಗೆ ಅನ್ಯಾಯವೆಸಗಿದೆ. ಇದು ಸಂವಿಧಾನ ಪರವಾ? ಕಾಂಗ್ರೆಸ್ಸಿಗರು ಸಂವಿಧಾನ ಬಾಹಿರವಾದ ಕೆಲಸ ಮಾಡಿದ್ದಾರೆ. ಇದಕ್ಕೆ ಕ್ಷೇತ್ರದ ಒಡೆಯ ಮಲೆಮಹದೇಶ್ವರರೇ ಉತ್ತರ ಕೊಡಬೇಕಿದೆ ಎಂದು ಕಿಡಿ ಕಾರಿದರು.

ಇತ್ತೀಚೆಗೆ ಎಸ್ಟಿ ನಿಗಮದಲ್ಲಿ 184 ಕೋಟಿ ರೂ. ಹಗರಣದಲ್ಲಿ ಕಾಂಗ್ರೆಸ್ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಕಾಂಗ್ರೆಸ್ಸಿಗರು ಸಂವಿಧಾನ ಆಶಯಗಳ ವಿರುದ್ಧ ಕೆಲಸ ಮಾಡುತ್ತಿದ್ದು, ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಪರಾಚಿತ ಅಭ್ಯರ್ಥಿ ಎಸ್.ಬಾಲರಾಜು ಮಾತನಾಡಿ, ರಾಜಕೀಯದಲ್ಲಿ ನನಗೆ 32 ವರ್ಷಗಳ ಅನುಭವವಿದೆ. ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಬಂದವನು. ಮೊದಲ ಬಾರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಕಡಿಮೆ ಅಂತರದಿಂದ ಸೋಲಬೇಕಾಯಿತು. ಹಾಗಾಗಿ ನನಗೆ ಸೋಲು ಹೊಸದೇನಲ್ಲ. ಆದರೆ ಕಾಂಗ್ರೆಸ್ಸಿಗರು ಬಾಲರಾಜು ಅವರು ದುಡ್ಡು ತಗೋಂಡ್ರು ಅಂತಾ ಚುನಾವಣೆಗೂ ಮುನ್ನವೇ ಅಪ ಪ್ರಚಾರ ಮಾಡಿದರು. ನಾನು ಸಂಸ್ಕಾರ ಕುಟುಂಬದಲ್ಲಿ ಜನಿಸಿದವನು. ಯಾವತ್ತೂ ಹೇಸಿಗೆ ತಿನ್ನುವ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಿಳಿಸುವಲ್ಲಿ ಹಾಗೂ ಅಪ ಪ್ರಚಾರದ ಬಗ್ಗೆ ಕಾಂಗ್ರೆಸ್ಸಿಗರ ವಿರುದ್ಧ ಬಿಜೆಪಿಗರು ನಿಲ್ಲಲು ಸಾಧ್ಯವಿಲ್ಲವಾಯಿತು. ಇದರಿಂದ ಚುನಾವಣೆಯಲ್ಲಿ ಹಿನ್ನಡೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್‌ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಸೋಲು ಗೆಲುವಿನ ಮೆಟ್ಟಿಲು. ಈ ದೆಸೆಯಲ್ಲಿ ಅಬ್ರಹಾಂ ಲಿಂಕನ್ ಸತತ 13 ಬಾರಿ ಸೋತು ಕೊನೆಗೆ ಅಮೆರಿಕ ಅಧ್ಯಕ್ಷರಾಗಿದ್ದರು. ಹಾಗಾಗಿ ದೇಶದಲ್ಲಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಜನಪರ ಯೋಜನೆಗಳು, ವಿಜಯೇಂದ್ರ ಅವರ ಯುವ ನಾಯಕತ್ವ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಬಾರಿ ರಾಜ್ಯದಲ್ಲಿ ಹೆಚ್ಚು ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ಚಾ.ನಗರದಲ್ಲಿ ಕೆಲವು ಕಾರಣದಿಂದ ಸೋಲಬೇಕಾಯಿತು. ಇದಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕಾರಣರಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಎದೆಗುಂದುವ ಅವಶ್ಯಕತೆ ಇಲ್ಲ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕಿದೆ. ಇದರಿಂದ ಕಾಂಗ್ರೆಸ್‌ಗೆ ತಕ್ಕ ಉತ್ತರ ಸಿಗಲಿದೆ ಎಂದರು.

ಒಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ ಅವರು ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಜೀವಮಾನದ ಸಾಧನೆಯನ್ನು ವಿವರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್‌ಕುಮಾರ್, ಕಾರ್ಯದರ್ಶಿ ವೆಂಕಟೇಗೌಡ, ಎಸ್ಟಿ ಮೋರ್ಚಾ ಕಾರ್ಯದರ್ಶಿ ಜಯಸುಂದರ್, ಜಿಲ್ಲಾ ಉಸ್ತುವಾರಿ ಪ್ರಣೇಶ್, ಕಾರ್ಯದರ್ಶಿ ರೇವಣ್ಣ, ಮಂಡಲಾಧ್ಯಕ್ಷರಾದ ಹನೂರಿನ ವೃಷಭೇಂದ್ರಸ್ವಾಮಿ, ಮ.ಬೆಟ್ಟ ರಾಜು, ಮುಖಂಡರಾದ ಡಾ.ಪ್ರೀತನ್ ನಾಗಪ್ಪ, ನಿಶಾಂತ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net