

ಮುಂಡರಗಿ: ಮಕ್ಕಳಲ್ಲಿ ಶಾಲಾ ಹಂತದಿಂದಲೇ ದೇಶಾಭಿಮಾನ, ಸೇವಾ ಮನೋಭಾವನೆ, ಜೀವನ ಕೌಶಲ್ಯಗಳ ಶಿಕ್ಷಣವನ್ನು ನೀಡುತ್ತಿರುವ ಭಾರತ ಸೇವಾದಳ ಕಾರ್ಯ ಶ್ಲಾಘನೀಯ. ಎಲ್ಲ ಪಾಥಮಿಕ, ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಸೇವಾದಳ ತರಬೇತಿ ಪಡೆದ ಶಿಕ್ಷಕರು ಸೇವಾದಳ ಶಾಖೆಗಳನ್ನು ತೆರೆಯಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್.ಬಾರ್ಕಿ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಭಾರತ ಸೇವಾದಳ ತರಬೇತಿ ಪಡೆದ ಶಿಕ್ಷಕ-ಶಿಕ್ಷಕಿಯರ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿ ಮಾರ್ಗದರ್ಶನದಲ್ಲಿ ದೇಶವ್ಯಾಪಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ ಭಾರತ ಸೇವಾದಳ ಸಂಸ್ಥೆ ಶ್ರಮದ, ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳ ತಾಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ತಾಲೂಕಿನಲ್ಲಿ ಭಾರತ ಸೇವಾದಳ ಕಾರ್ಯ ಚಟುವಟಿಕೆಗಳು ಬಹಳ ಚೆನ್ನಾಗಿ ಜರುಗುತ್ತಿದ್ದು ಸೇವಾದಳ ಸಂಸ್ಥಾಪಕ ಡಾ.ನಾ.ಸು.ಹರ್ಡೀಕರ್ ಆಶಯದಂತೆ ಭಾರತ ಸೇವಾದಳ ಉತ್ತಮವಾದ ಕಾರ್ಯ ಮಾಡುತ್ತಿದೆ ಎಂದರು.
ಭಾರತ ಸೇವಾದಳ ಗದಗ ಜಿಲ್ಲಾ ಸಂಘಟಕ ಕುಮಾರಸ್ವಾಮಿ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಯೋ ನಿವೃತ್ತಿ ಹೊಂದಿದ ಸೇವಾದಳ ಸಂಪನ್ಮೂಲ ವ್ಯಕ್ತಿ ವೈ.ಎಚ್.ಬಚನಳ್ಳಿ ಹಾಗೂ ಎನ್.ಎನ್.ಕಲಕೇರಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ-ಶಿಕ್ಷಕಿಯರಿಂದ ಗೌರವ ರಕ್ಷೆ, ಸರ್ವಧರ್ಮಿಯ ಪ್ರಾರ್ಥನೆ, ವಿವಿಧ ಸೇವಾದಳ ದೈಹಿಕ ಚಟುವಟಿಕೆ ಜರುಗಿದವು.
ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ದೈಹಿಕ ಶಿಕ್ಷಣಾಧಿಕಾರಿ ಜಿ.ಬಸವಣ್ಣೆಪ್ಪ, ಶಿಕ್ಷಣ ಸಂಯೋಜಕ ಕುಮಾರ, ಶಾಲಾ ಮುಖ್ಯಶಿಕ್ಷಕ ಪಿ.ಡಿ.ಹಿರೇಮಠ, ಉಪಸ್ಥಿತರರು ಇದ್ದರು. ಸೇವಾದಳ ಶಿಕ್ಷಕ ಬಸವರಾಜ ಮೇಗಲಮನಿ ನಿರೂಪಿಸಿದರು.