

ಮೂಡಿಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡುವ ಜತೆಗೆ ಇಲಾಖೆಯ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ, ವೇಯಿಂಗ್ ಮಿಷನ್ ಮತ್ತು ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿ, ಗರ್ಭಿಣಿ ಬಾಣಂತಿಯರು ಮತ್ತು ಮಕ್ಕಳನ್ನು ಹಾರೈಕೆ ಮಾಡುವ ಮಹತ್ವದ ಕೆಲಸವನ್ನು ಸರ್ಕಾರ ಶಿಶು ಅಭಿವೃದ್ಧಿ ಇಲಾಖೆಗೆ ವಹಿಸಿದೆ ಇಲ್ಲಿನ ಸಿಬ್ಬಂದಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸರ್ಕಾರದ ವಿವಿಧ ಸವಲತ್ತುಗಳು ತಲುಪುತ್ತಿದೆ. ತಾಲೂಕಿನ ಎಲ್ಲ ಕಡೆ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸಲಾಗಿದೆ ಐದು ಕಡೆ ಜಾಗದ ಕೊರತೆಯಿಂದ ನಿರ್ಮಾಣ ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಮಾತನಾಡಿ, ಅಂಗನವಾಡಿಯಲ್ಲಿ ದೀರ್ಘಕಾಲ ಕಾರ್ಯಕರ್ತೆ ಮತ್ತು ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ನಿವೃತ್ತರಿಗೆ ದೀರ್ಘ ಅನಾರೋಗ್ಯ ಉಂಟಾದಲ್ಲಿ ಇಲಾಖೆಯಿಂದ 50 ಸಾವಿರ ರೂ. ಹಾಗೂ ಶವ ಸಂಸ್ಕಾರಕ್ಕೆ 50 ಸಾವಿರ ರೂ. ನೀಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರು ಮಾತೃವಂದನ, ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ, ಪೋಷನ್ ಅಭಿಯಾನ ಸೇರಿದಂತೆ ಇಲಾಖೆ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಿದ್ದಾರೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರಾದ ಕಮಲಾ, ಲಲಿತಾ, ಪಾರ್ವತಿ, ಸಹಾಯಕಿ ಲಲಿತಮ್ಮ ಅವರನ್ನು ಸನ್ಮಾನಿಸಲಾಯಿತು. ಪಿಡಿಪಿಒಶೋಭಾ ಬಿ ಮ್ಯಾಳಿ, ಅಧಿಕಾರಿ ನಯನ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷ ಶೈಲಾ ಇತರರಿದ್ದರು.