ದಶಕ ಕಳೆದರೂ ಮುಗಿಯದ ಕಾಮಗಾರಿ

26KWR2A
Published on

ಕುಮಟಾ: ಭ್ರಷ್ಟಾಚಾರ, ನಿರ್ಲಕ್ಷ್ಯ, ಅಸಮರ್ಪಕ ಮೇಲುಸ್ತುವಾರಿಯಿಂದ ಸರ್ಕಾರಿ ಯೋಜನೆಗಳು ವಿಫಲವಾಗುತ್ತವೆ ಎಂಬುದು ಜನರ ಆರೋಪ. ಕುಮಟಾ ಒಳಚರಂಡಿ ಯೋಜನೆ ಅದಕ್ಕೊಂದು ಜ್ವಲಂತ ಉದಾಹರಣೆಯಾಗಿದೆ. ಕಾಮಗಾರಿ ಆರಂಭವಾಗಿ ದಶಕ ಕಳೆದಿವೆ. 2 ಬಾರಿ ದರ ಪರಿಷ್ಕರಣೆಯಾಗಿದೆ. ಪುರಸಭೆಯಲ್ಲಿ ಎರಡು ಆಡಳಿತ ಮಂಡಳಿ ಅಧಿಕಾರ ಪೂರೈಸಿವೆ. ಇಬ್ಬರು ಶಾಸಕರ ಅವಧಿ ಮುಗಿದರೂ ಯೋಜನೆ ಮಾತ್ರ ಮುಕ್ತಾಯವಾಗಿಲ್ಲ.
ಇದುವರೆಗೆ ಮಾಡಿದ ಕೆಲಸಗಳು ಹೊಸ ರಸ್ತೆಗಳಡಿ ಸಮಾಧಿಯಾಗಿವೆ. ಹಾಗಾಗಿ ಸದ್ಯಕ್ಕೆ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇದುವರೆಗೆ ಖರ್ಚಾದ ಹಣದ ಕಥೆಯೇನು ಎಂಬುದಕ್ಕೆ ಉತ್ತರವಿಲ್ಲ. ಒಳಚರಂಡಿಯ ಇತಿಹಾಸ ಬಗೆದರೆ ಗಬ್ಬು ವಾಸನೆ, ಗಲೀಜು ಮಾತ್ರ ಕಾಣುತ್ತದೆ. ಪಟ್ಟಣದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆಯಾಗಬಹುದಾಗಿದ್ದ ಒಳಚರಂಡಿ ಕಾಮಗಾರಿ ಭ್ರಷ್ಟರ ಹಪಾಹಪಿಯಿಂದಾಗಿ ಅತ್ತ ಸರಿಪಡಿಸಲೂ ಆಗದ, ಮುಂದುವರೆಸಲೂ ಆಗದ ದುಸ್ಥಿತಿ ತಲುಪಿದೆ. ಒಟ್ಟಾರೆ ಕುಮಟಾದ ಇತಿಹಾಸದಲ್ಲಿ ಇಲ್ಲಿನ ಒಳಚರಂಡಿ ಕಾಮಗಾರಿ ಸಂಪೂರ್ಣ ವಿಫಲ, ಗುಣಮಟ್ಟರಹಿತ, ಕಳಂಕಿತ ಮತ್ತು ಸರಿಪಡಿಸಲಾಗದ ಕಾಮಗಾರಿಯಾಗಿ ದಾಖಲಾಗಿದೆ.

ನೀರಿನಂತೆ ಖರ್ಚಾದ ಹಣ: ನಗರಾಭಿವೃದ್ಧಿ ಇಲಾಖೆಯ ವರದಿಯಂತೆ 2015-17ರ ನಡುವಿನ ಆಯವ್ಯಯದಲ್ಲಿ ಒಟ್ಟು ಕಾಮಗಾರಿಯ ಅಂದಾಜು ವೆಚ್ಚದಲ್ಲಿ ಪ್ರಾರಂಭಿಕ 50 ಲಕ್ಷ ರೂ. ಅನುದಾನ ನೀಡಿದೆ. 2017-18ರ ಆಯವ್ಯಯದಲ್ಲಿ 15 ಕೋಟಿ ರೂ. ನೀಡಿದೆ. ಯೋಜನಾ ವೆಚ್ಚದಲ್ಲಿ 2017ರವರೆಗೆ 7.46 ಕೋಟಿ ರೂ. ಖರ್ಚಾಗಿದೆ. 2018-19ರ ಬಜೆಟ್​ನಲ್ಲಿ 8.5 ಕೋಟಿ ರೂ. ನೀಡಿದ್ದು, ಯೋಜನಾ ವೆಚ್ಚದಲ್ಲಿ 26.59 ರೂ ಖರ್ಚಾಗಿದೆ. 2019-20ರ ಆಯವ್ಯಯದಲ್ಲಿ 2.54 ಕೋಟಿ ರೂ. ನೀಡಿದ್ದು, ಒಟ್ಟಾರೆ ಆವರೆಗೆ ಯೋಜನಾ ವೆಚ್ಚದಲ್ಲಿ 32.45 ಕೋಟಿ ರೂ. ಖರ್ಚಾಗಿದೆ. ಆದರೆ, ಗುತ್ತಿಗೆದಾರನನ್ನು ನಂಬಿ ಬಂದಿದ್ದ ಅನ್ಯ ರಾಜ್ಯದ ಕಾರ್ವಿುಕರು ಇತ್ತ ಕೆಲಸವೂ ಇಲ್ಲದೇ ಅತ್ತ ಕೈಯಲ್ಲಿ ಕಾಸಿಲ್ಲದೇ ಹೊಟ್ಟೆಪಾಡಿಗಾಗಿ ಸ್ಥಳೀಯರ ಮನೆಗಳಲ್ಲಿ ಕೂಲಿ ಮಾಡಿ ಊರಿಗೆ ಮರಳಿದ್ದು, ಯೋಜನೆಯ ಹೀನಾಯ ಸ್ಥಿತಿಗೆ ಕೈಗನ್ನಡಿ ಹಿಡಿದಂತಿತ್ತು.

ಸಮಾಧಿಯಾದ ಯೋಜನೆ: ಸದ್ಯ ಈಗ ನಿಜಕ್ಕೂ ಕುಮಟಾದಲ್ಲಿ ಒಳಚರಂಡಿ ಕಾಮಗಾರಿ ಮುಂದುವರಿಸುವುದಕ್ಕೆ ಯೋಗ್ಯವಾಗಿ ಉಳಿದಿದೆಯೇ ಎಂಬುದು ಪ್ರಶ್ನೆಯಾಗಿದೆ. ಬಹುಪಾಲು ಪೈಪ್​ಲೈನ್, ಮ್ಯಾನ್​ಹೋಲ್ ಹೊರತಾಗಿ ಬೇರೆ ಪ್ರಮುಖ ಕಾಮಗಾರಿಗಳು ನಡೆದೇ ಇಲ್ಲ. ವಿಶೇಷವಾಗಿ ಹಲವು ವಾರ್ಡ್ ಗಳ ರಸ್ತೆಯಲ್ಲಿ ಮ್ಯಾನ್​ಹೋಲ್​ಗಳ ಮೇಲೆಯೇ ಡಾಂಬರು ಹಾಕಿ ಸಮತಟ್ಟು ಮಾಡಲಾಗಿದೆ. ಈಗಾಗಲೆ ಮಾಡಿರುವ ಕಾಮಗಾರಿಯೂ ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುವ ಮುನ್ಸೂಚನೆ ಇದ್ದು, ಮಳೆಗಾಲದಲ್ಲಿ ಮ್ಯಾನ್​ಹೋಲ್​ಗಳಲ್ಲಿ ನೀರು ಉಕ್ಕುತ್ತಿದೆ.

ಕುಮಟಾದಲ್ಲಿ ಒಳಚರಂಡಿ ಕಾಮಗಾರಿ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಹೆಚ್ಚಿನ ಅನುದಾನ ಅಗತ್ಯವಿದೆ. ಹಿಂದಿನ ಅವಧಿಯಲ್ಲಿ ಕಾಮಗಾರಿಗೆ ಪರಿಷ್ಕೃತ ದರದ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾತ್ವಿಕವಾಗಿ ಒಪ್ಪಿಗೆ ಸಿಕ್ಕಿದ್ದರೂ ಹಣ ಮಂಜೂರು ಆಗಿರಲಿಲ್ಲ. ಈಗ ನಾನು ವಿದೇಶದಲ್ಲಿದ್ದು, ಬಂದ ತಕ್ಷಣ ಒಳಚರಂಡಿ ಕಾಮಗಾರಿ ಸಹಿತ ಹಲವು ಪ್ರಮುಖ ಯೋಜನೆಗಳ ಬಗ್ಗೆ ಸರ್ಕಾರದ ಮಂಜೂರಾತಿಗೆ ಕಾರ್ಯಶೀಲನಾಗುತ್ತೇನೆ. ಕಾಮಗಾರಿಯ ಅಡ್ಡಿಗಳನ್ನು ನಿವಾರಿಸಲು ಎಲ್ಲರ ಸಹಯೋಗದಲ್ಲಿ ಕೆಲಸ ಮಾಡಲಾಗುವುದು.| ದಿನಕರ ಶೆಟ್ಟಿ ಕುಮಟಾ ಶಾಸಕ

ಏನೇನಾಯ್ತು

  • ಪಟ್ಟಣದಲ್ಲಿ ಒಳಚರಂಡಿ ಯೋಜನೆಗೆ 2009ರಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. 2010ರ ಫೆ. 8ರಂದು 35 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಗೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಕಾಮಗಾರಿ ಪ್ರಾರಂಭವಾಗಿರಲಿಲ್ಲ.
  • 6 ವರ್ಷಗಳ ಬಳಿಕ 2016ರ ಮೇ 28ರಂದು ಯೋಜನೆಗೆ ಮರುಜೀವ ಬಂದಿದ್ದು, ಗುಜರಾತ್​ನ ಮೆಹಸಾನಾದ ಜಯಂತಿ ಸುಪರ್ ಕನ್​ಸ್ಟ್ರನ್ಸ್ ಕಂಪನಿಯು 41.32 ಕೋ. ರೂ ಗುತ್ತಿಗೆ ಪಡೆದು ಕಾಮಗಾರಿ ಆರಂಭಿಸಿತ್ತು.
  • ಒಳಚರಂಡಿ ಕೊಳವೆಗಳ ಅಳವಡಿಕೆ, ಮ್ಯಾನ್​ಹೋಲ್, ಗೃಹಸಂಪರ್ಕ, ವೆಟ್​ವೆಲ್ ನಿರ್ವಣ, ಸಂಸ್ಕರಣಾ ಘಟಕ ಸಹಿತ 2024 ರವರೆಗೂ ನಿರ್ವಹಣೆಯ ಸಂಪೂರ್ಣ ಯೋಜನೆಯ ಜವಾಬ್ದಾರಿಯನ್ನು ಕಂಪನಿ ಹೊತ್ತಿತ್ತು. ಅಂದಿನ ಶಾಸಕಿ ಶಾರದಾ ಶೆಟ್ಟಿ ಇದು ದಿ. ಮೋಹನ ಶೆಟ್ಟಿ ಅವರ ಕನಸೆಂದು ಹೇಳಿದರು.
  • ಸಾಕಷ್ಟು ಜನ ವಿರೋಧದ ನಡುವೆ ಕುಂಟುತ್ತ ಸಾಗಿದ ಒಳಚರಂಡಿ ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರರಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಜನ ಗುಣಮಟ್ಟದ ಕಾಮಗಾರಿಗೆ ಒತ್ತಾಯಿಸಿದ್ದರು. ಹಲವು ಪ್ರತಿಭಟನೆಗಳ ಜತೆಗೆ ಬಗ್ಗೋಣ ಹಾಗೂ ವನ್ನಳ್ಳಿಯಲ್ಲಿ ಎಸ್​ಟಿಪಿ ನಿರ್ವಣಕ್ಕೆ ಸ್ಥಳೀಯವಾಗಿ ವಿರೋಧ ಗಂಭೀರ ಸ್ವರೂಪದೊಂದಿಗೆ ನ್ಯಾಯಾಲಯದ ಕಟ್ಟೆಯನ್ನೂ ಏರಿತ್ತು. ಅಲ್ಲಿಗೆ ಕಾಮಗಾರಿ ಪ್ರಾರಂಭವಾಗಿ ಐದಾರು ವರ್ಷಗಳ ನಂತರ ಸಂಪೂರ್ಣವಾಗಿ ನಿಂತಿತು.
  • ಪಟ್ಟಣದ ಚಿತ್ರಗಿಯ ಸರ್ವೆ ನಂ. 84ರಲ್ಲಿ ಒಳಚರಂಡಿ ಯೋಜನೆಯ ಸೆಫ್ಟೇಜ್ ನಿರ್ವಹಣೆಗಾಗಿ ಅನೆರೊಬಿಕ್ ಡೈಜೆಸ್ಟರ್ ಸಂಸ್ಕರಣ ಘಟಕ ಕಾಮಗಾರಿ ಕೈಗೆತ್ತಿಕೊಳ್ಳಲು 2020ರ ಜು. 15ರಂದು ಮುಖ್ಯಾಧಿಕಾರಿ ಆಡಳಿತ ಸಮಿತಿಯ ಅನುಮೋದನೆ ಪಡೆದಿದೆ. ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಅದೇ ತಿಂಗಳು 28ರಂದು ಪತ್ರ ಮುಖೇನ ಮಂಜೂರಿ ನೀಡಿದ್ದರು. ಇದೇ ವಿಷಯ 2020ರ ಡಿ. 23ರಂದು ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ಚರ್ಚೆಯಾಗಿ ಆಡಳಿತ ಸಮಿತಿಯ ಬಹುಮತದ ಸದಸ್ಯರ ಆಧಾರದಲ್ಲಿ ಕಾಮಗಾರಿಗೆ ಒಪ್ಪಿಗೆ ನಿರಾಕರಿಸಿ ಠರಾಯಿಸಲಾಯಿತು.
  • ಎರಡು ವರ್ಷಗಳ ಬಳಿಕ ಒಳಚರಂಡಿ ಯೋಜನೆ ಮುನ್ನಡೆಸುವ ಪ್ರಯತ್ನ ನಡೆಯಿತು. ಒಳಚರಂಡಿ ಮಂಡಳಿ ಎಸ್​ಟಿಪಿ ಹಾಗೂ ವೆಟ್​ವೆಲ್ ನಿರ್ವಣಕ್ಕೆ ಪರಿಷ್ಕೃತ ಅಂದಾಜು ಪಟ್ಟಿಯ ಅಗತ್ಯವನ್ನು ಮನಗಂಡು 79.63 ಕೋ.ರೂ.ಗಳಿಗೆ ಪ್ರಸ್ತಾವನೆ ತಯಾರಿಸಿ 2022ರ ಮಾ. 9ರಂದು ಸಲ್ಲಿಸಿತ್ತು. ಕೆಲ ತಿಂಗಳಲ್ಲಿ ಪ್ರಸ್ತಾವನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಶಾಸಕ ದಿನಕರ ಶೆಟ್ಟಿ ಘೊಷಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net