ಹಂದಿಗುಂದ: ಗ್ರಾಮದ ಶ್ರೀ ಹಾಲಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಸಡಗರ ಸಂಭ್ರಮದಿಂದ ಶುಕ್ರವಾರ ಜರುಗಿತು. ಶುಕ್ರವಾರ ಬೆಳಗ್ಗೆ 6 ಗಂಟೆಗೆ ಶ್ರೀ ಹಾಲಸಿದ್ದೇಶ್ವರ ದೇವರ ಕರ್ತ ಗದ್ದುಗೆಗೆ ವಿಶೇಷ ಪೂಜೆ ನೆರವೇರಿತು.
ಭಕ್ತರು ದೇವರಿಗೆ ಬಾಳೆಹಣ್ಣು, ಉತ್ತತ್ತಿ, ಖಾರಿಕ್ ಅರ್ಪಿಸಿದರು. ಸುಪ್ರಸಿದ್ಧ ಕಲಾವಿದರಿಂದ ಡೊಳ್ಳಿನ ಹಾಡುಗಾರಿಕೆ ಜರುಗಿತು. ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರ್ಪಣೆ ನೆರವೇರಿತು.
ಸಂಜೆ 4ಗಂಟೆಗೆ ಸುಮಂಗಲೆಯರಿಂದ ಕುಂಭ ಆರತಿ, ವಿವಿಧ ಕಲಾ ಬಳಗದೊಂದಿಗೆ ಶ್ರೀ ಹಾಲಸಿದ್ಧ ದೇವರ ಹಾಗೂ ಗ್ರಾಮದ ದೇವರುಗಳ ಪಲ್ಲಕ್ಕಿಗಳ ಉತ್ಸವ ಜರುಗಿತು. ಪಲ್ಲಕ್ಕಿ ಮೇಲೆ ಉಣ್ಣೆ, ಭಂಡಾರ ಹಾರಿಸುವುದು ಮನಮೋಹಕವಾಗಿತ್ತು. ಸಂಜೆ 5ಗಂಟೆಗೆ ಕರಿ ಹರಿಯುವ, ಶರಣ ಮಲ್ಲಪ್ಪ ಪೂಜೇರಿ ಇವರಿಂದ ಅಲಗ ಹಾಯುವ ಕಾರ್ಯಕ್ರಮ ಜರುಗಿತು. ರಾತ್ರಿ 9ಗಂಟೆಗೆ ಜಾನಪದ ಡೊಳ್ಳಿನ ಪದಗಳ ಹಾಡುಗಾರಿಕೆ ಜರುಗಿದವು.