

ಜಮಖಂಡಿ: ಅವ್ವ ಎನ್ನುವ ಪದದಲ್ಲಿ ಶಕ್ತಿ ಇದೆ. ಮಕ್ಕಳಿಗಾಗಿ ತಾಯಿ ಎಲ್ಲವನ್ನು ತ್ಯಾಗ ಮಾಡುತ್ತಾಳೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅವ್ವ ನನ್ನವ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರೃ ಹೋರಾಟದಲ್ಲಿ ಮಹಿಳೆಯರೂ ಹೋರಾಡಿದ್ದಾರೆ. ಮಹಿಳೆಯರು ಪುರುಷರಕ್ಕಿಂತ ಯಾವುದರಲ್ಲೂ ಕಡಿಮೆ ಇಲ್ಲ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತಿದ್ದಾರೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ಸಮಾನತೆ ತರುವಲ್ಲಿ ಶ್ರಮಿಸಿದ್ದರು, ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗೆ ಶಿಕ್ಷಣ ನೀಡುವದರ ಮೂಲಕ ಶರಣ ಆಶಯಗಳನ್ನು ಈಡೇರಿಸಿದ್ದಾರೆ. ಅವರು ತೋರಿದ ಹಾದಿಯಿಂದ ಮಹಿಳೆಯರು ಇಂದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಗೋಠೆ ಬಸವ ಕೇಂದ್ರದ ಡಾ. ಗಂಗಾಶ್ರೀ ಅನಂತಪೂರ ಮಾತನಾಡಿ, ಮಗು ಶಿಕ್ಷಣ ಪಡೆಯುವುದಕ್ಕಿಂತ ಮೊದಲೇ ತಾಯಿ ನೈತಿಕ ಶಿಕ್ಷಣ ನೀಡುತ್ತಾಳೆ ಎಂದರು.
ಓಲೆಮಠದ ಆನಂದ ದೇವರು ಮಾತನಾಡಿ, ಮಹಿಳೆಯರ ಸಾಧನೆಗೆ ಮೂಲ ಬಸವಣ್ಣನವರಾಗಿದ್ದಾರೆ. ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀಡಬೇಕು, ಮಕ್ಕಳ ಮುಂದೆ ಪಾಲಕರು ಹಾದಿ ತಪ್ಪಬಾರದು ಎಂದರು.
ಇಳಕಲ್ಲ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಆಶಿರ್ವಚನ ನೀಡಿದರು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಅಶೋಕ ಬರಗುಂಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಸುಮಿತ್ರಾ ನ್ಯಾಮಗೌಡ, ಹೇಮಾ ಮಂಟೂರ, ಗಂಗೂಬಾಯಿ ಮುಧೋಳ, ಅನ್ನಪೂರ್ಣಾ ಮಾಳಿ, ಆಶಾದೇವಿ ಗುಡಗುಂಟಿ, ಅರ್ಚನಾ ಶಹಾ, ನಂದಿನಿ ಬಾಂಗಿ, ರತ್ನಾ ದಳವಾಯಿ, ವಿಮಲಾ ಕುಬಕಡ್ಡಿ, ಜ್ಯೋತಿ ಪಾಟೀಲ ಇತರರು ಇದ್ದರು.
ಸರಸ್ವತಿ ಸಬರದ ವಚನ ಗಾಯನ ಮಾಡಿದರು. ಲಕ್ಷ್ಮೀ ಮಾಳಿ ಸ್ವಾಗತಿಸಿದರು, ಪೂರ್ಣಿಮಾ ಮಾಳಿ ನಿರೂಪಿಸಿದರು ಹಾಗೂ ರುಕ್ಮಿಣಿ ಮುರಕಟನಾಳ ವಂದಿಸಿದರು.