ಹೊಸ ಉಡುಗೆ ತೊಟ್ಟು ಹಬ್ಬ ಆಚರಿಸಿದ ಹೆಂಗಳೆಯರು

20 lxr 1 PANCHAMI
Published on

ಲಕ್ಷ್ಮೇಶ್ವರ: ‘ನಾಗರ ಪಂಚಮಿ ನಾಡಿಗೆ ದೊಡ್ಡದು’ ಎನ್ನುವಂತೆ ಭಾನುವಾರ ಮಹಿಳೆಯರ ಪಾಲಿಗೆ ಸಂಭ್ರಮದ ವಾತಾವರಣವೇ ಸೃಷ್ಟಿಯಾಗಿತ್ತು.

ಬೆಳಗ್ಗೆ ಮನೆಯನ್ನು ಶೃಂಗರಿಸಿ ಪೂಜಾ ಕಾರ್ಯಕ್ರಮ ನೆರವೇರಿಸಿದ ಮಹಿಳೆಯರು, ಮಕ್ಕಳು ಹೊಸ ಉಡುಗೆ ತೊಟ್ಟು ತಮ್ಮ ಓಣಿಯ ನಾಗ ದೇವರ ಮೂರ್ತಿಗೆ ಹಾಲೆರೆದರು.
ನಾಗಮೂರ್ತಿಗೆ ಹಂಗನೂಲು, ಕೊಕ್ಕಬತ್ತಿ, ಕಡ್ಲಿ ಉಸುಳಿ, ಅಳ್ಳಿನ ಜೋಳ, ಅಳ್ಳಿಟ್ಟು, ಬೆಲ್ಲ ಹೀಗೆ ಸಾಂಪ್ರದಾಯಿಕ ನೈವೇದ್ಯದೊಂದಿಗೆ ಪೂಜೆ ಮಾಡಿದರು. ಸುಖ, ಸಂತೋಷ, ಕೀರ್ತಿ, ಸಂಪತ್ತು, ಆರೋಗ್ಯ ಪ್ರಾಪ್ತಿಗಾಗಿ ಬಂಧು- ಬಳಗದವರ ಹೆಸರು ಹೇಳಿ ನಾಗಮೂರ್ತಿಗೆ ಭಕ್ತಿಯಿಂದ ಹಾಲೆರೆಯುವ ಮೂಲಕ ನಾಗರ ಪಂಚಮಿ ಆಚರಿಸಿದರು.


ಪಟ್ಟಣದ ಸೊಪ್ಪಿಕೇರಿ, ಪೇಠಬಣ, ಬಸ್ತಿಕೇರಿ, ಹಳ್ಳದಕೇರಿ, ಉಪನಾಳ ನಗರ, ಅಂಬೇಡ್ಕರ ನಗರ, ವಿನಾಯಕನಗರ, ಈಶ್ವರ ನಗರ ಸೇರಿ ಹೊಸ ಬಡಾವಣೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಡಗರ ಕಂಡುಬಂದಿತು.


ಮಕ್ಕಳು ಉತ್ಸಾಹದಿಂದ ಜೋಕಾಲಿ ಜೀಕುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು. ಮನೆಯಲ್ಲಿ ಶೇಂಗಾ, ಕಡಲೆ, ಡಾಣಿ-ಗುಳಗಿ ಉಂಡೆ ಮತ್ತು ಚಕ್ಕುಲಿ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಸವಿಯಲಾಯಿತು. ಗ್ರಾಮೀಣ ಭಾಗದಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ ಜೀಕಿದರು. ಯುವಕರು ನಿಂಬೆ ಹಣ್ಣು ಎಸೆತ, ಗೋಲಿ ಎಸೆತ, ಕಣ್ಣಿಗೆ ಬಟ್ಟೆ ಕಟ್ಟಿ ಮನೆ ಅಥವಾ ಪ್ರದೇಶ ಗುರುತಿಸುವಂತಹ ಮೋಜಿನ ಆಟ ಆಡುತ್ತಿದ್ದ ದೃಶ್ಯವೂ ಕಂಡು ಬಂದಿತು. ಸೋಮವಾರ ಮನೆಯಲ್ಲಿ ಮಣ್ಣಿನ ನಾಗಮೂರ್ತಿಗೆ ಹಾಲೆರೆಯುವ ಹಬ್ಬ ಆಚರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net