

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಶೆಡ್‌ವೊಂದರಲ್ಲಿ ಸೆ.25ರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯ ಗುರುತು ಪತ್ತೆಯಾಗಿದೆ.
ಈಕೆಯನ್ನು ಬೆಂಗಳೂರಿನ ಆಂದ್ರಹಳ್ಳಿ ಮುಖ್ಯ ರಸ್ತೆಯ ವಿನುತಾ(24) ಎಂದು ಗುರುತಿಸಲಾಗಿದೆ.
ಇವರ ಪತಿ ಸಿ.ರಘು, ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸೆ.25ರಂದು ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ಮಹಿಳೆಗೆ ಇಬ್ಬರು ಪುತ್ರರು ಇದ್ದಾರೆ. ಈಕೆ ತನ್ನ ಮೊದಲ ಮಗ 5 ವರ್ಷದ ರಾಜೀವ್‌ಗೌಡನಿಗೆ ಊಟ ಕೊಡಲು ಶಾಲೆಗೆ ತೆರಳಿ ಊಟ ಮಾಡಿಸಿದ್ದರು. ಬಳಿಕ ಮೊಬೈಲ್‌ಅನ್ನು ಮನೆಯಲ್ಲೇ ಇಟ್ಟು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಚಾಮರಾಜನಗರ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.