

ಬೆಳಗಾವಿ: ನಗರದ ಧರ್ಮನಾಥ ಭವನದ ಬಳಿಯ ವಡ್ಡರವಾಡಿಯಲ್ಲಿ ಮಹಿಳೆಯರಿಬ್ಬರನ್ನು ರಸ್ತೆಗೆ ಎಳೆದು ತಂದು ಬಟ್ಟೆ ಹರಿದು ಹಲ್ಲೆ ಮಾಡಿದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು, ಪ್ರತಿದೂರುಗಳು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶನಿವಾರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಹಲ್ಲೆಗೊಳಗಾದ ಮಹಿಳೆ ನೀಡಿದ ದೂರಿನ ಮೇಲೆ ಮಾಳಮಾರುತಿ ಠಾಣೆ ಪೊಲೀಸರು ಇಂದ್ರಾ ಅಷ್ಟೇಕರ, ಹೂವಪ್ಪ ಅಷ್ಟೇಕರ, ಮಣಿಕಂಠ ಅಷ್ಟೇಕರ ಎಂಬುವವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸ್ ಆಯುಕ್ತರಿಗೆ ವಹಿಸಿದ್ದೇವೆ. ಪ್ರಕರಣದ ಸತ್ಯಾಸತ್ಯತೆ ತನಿಖೆ ಬಳಿಕ ಗೊತ್ತಾಗಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸ್ಥಳೀಯರಿಂದ ಪ್ರತಿದೂರು:
ವಡ್ಡರವಾಡಿಯ ಮಹಿಳೆಯೊಬ್ಬರನ್ನು ಮಹಾರಾಷ್ಟ್ರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಪತಿ ಮನೆಯಲ್ಲಿ ಕಿರುಕುಳ ಆಗುತ್ತಿದ್ದರಿಂದ ತವರಿಗೆ ಬಂದ ಮಹಿಳೆ, ತಾಯಿಯ ಜತೆಗೆ ವಾಸವಾಗಿದ್ದಾರೆ. ಕಳೆದ ಐದು ತಿಂಗಳಿಂದ ಅವರ ಮನೆಗೆ ಪರಿಚಯಸ್ಥರು ಹಗಲು-ರಾತ್ರಿ ಪದೇಪದೆ ಬರುತ್ತಿದ್ದಾರೆ. ವೇಶ್ಯಾವಾಟಿಕೆ ನಡೆಯುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಪಂಚರು ಆ ಮಹಿಳೆಗೆ ವಿಚಾರಿಸುವ ವೇಳೆ, ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಹಿಳೆ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿರುವ ಅನುಮಾನದಿಂದ ಮೂವರೂ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಈ ವಿಷಯವನ್ನೂ ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಮಹಿಳೆಯರಿಬ್ಬರಿಗೂ ರಕ್ಷಣೆ ನೀಡಲು ಒಂದೆರಡು ದಿನ ಪೊಲೀಸ್ ಭದ್ರತೆ ಕಲ್ಪಿಸುತ್ತೇವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರೋಹನ ಜಗದೀಶ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸೇಠ್:
ಘಟನೆ ನಡೆದ ವಡ್ಡರವಾಡಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ವೇಳೆ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಸ್ಥಳಕ್ಕಾಗಮಿಸಿ ಮಾಹಿತಿ ಪಡೆದರು. ಹಲ್ಲೆಗೊಳಗಾದ ಮಹಿಳೆ ಹಾಗೂ ಸ್ಥಳೀಯರ ದೂರುಗಳನ್ನು ಆಲಿಸಿ, ಸೂಕ್ತ ತನಿಖೆ ನಡೆಸಿ ಪ್ರಕರಣ ಸುಖಾಂತ್ಯೆಗೊಳಿಸುವಂತೆ ಪೊಲೀಸ್‌ರಿಗೆ ತಿಳಿಸಿದರು.