

ಎಂ.ಪಿ.ವೆಂಕಟೇಶ್ ಮದ್ದೂರು
ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಾಗೂ ಕೆ.ಆರ್.ಎಸ್. ಅಣೆಕಟ್ಟೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದ ಪರಿಣಾಮ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಮದ್ದೂರು ಕಸಬಾ, ಆತಗೂರು, ಕೊಪ್ಪ ಹಾಗೂ ಸಿ.ಎ.ಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬೆಳೆದಿರುವ ಭತ್ತ, ರಾಗಿ, ಕಬ್ಬು, ರೇಷ್ಮೆ, ಮುಸುಕಿನ ಜೋಳ, ನೆಲಗಡಲೆ ಸೇರಿದಂತೆ ಹಲವು ಬೆಳೆಗಳಿಗೆ ನೀರಿಲ್ಲದೆ ಒಣಗಲಾರಂಭಿಸಿವೆ. ಕಷ್ಟಪಟ್ಟು ಸಾಲ-ಸೋಲ ಮಾಡಿ ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದರೂ ಉಳಿಸಿಕೊಳ್ಳದ ಅಸಹಾಯಕ ಸ್ಥಿತಿಗೆ ರೈತರು ತಲುಪಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ 8797 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 3788 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಹಾಗೂ 7815 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಈ ಪೈಕಿ 1065 ಹೆಕ್ಟೇರ್‌ನಲ್ಲಿ ಭತ್ತ, 3015 ಹೆಕ್ಟೇರ್‌ನಲ್ಲಿ ರಾಗಿ, 130 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 18 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ನೆಲಗಡಲೆ ನೀರಿಲ್ಲದೆ ಒಣಗಿವೆ ಎಂದು ಅಧಿಕಾರಿಗಳು ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ತಾಲೂಕಿನಲ್ಲಿ ಅಂದಾಜು 11 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಭತ್ತ, ರಾಗಿ, ಮುಸುಕಿನ ಜೋಳ ಮತ್ತು ನೆಲಗಡಲೆ ಸೇರಿದಂತೆ ಶೇ.33 ರಿಂದ 35 ರಷ್ಟು ಹಾನಿಗೊಳಗಾಗಿರುವ ಬೆಳೆಗಳಿಗೆ 450 ಲಕ್ಷ ರೂ. ಪರಿಹಾರ ನೀಡುವಂತೆ ಕೃಷಿ ಮತ್ತು ಕಂದಾಯ ಅಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗಳನ್ನು ಸರ್ವೇಯಲ್ಲಿ ಸೇರಿಸಿಲ್ಲ ಎಂದು ತಿಳಿದುಬಂದಿದೆ.
ರೈತರ ಹರಸಾಹಸ: ರೈತರು ತಾವು ಬೆಳೆದ ಭತ್ತ, ತೆಂಗಿನ ಸಸಿಗಳನ್ನು ಉಳಿಸಿಕೊಳ್ಳಲು ಹಣ ನೀಡಿ ಟ್ಯಾಂಕರ್‌ಗಳು ಮತ್ತು ಟ್ರಾೃಕ್ಟರ್‌ಗಳಲ್ಲಿ ಡ್ರಮ್ ಮೂಲಕ ನೀರು ತುಂಬಿಸಿಕೊಂಡು ಬಂದು ಬೆಳೆಗಳಿಗೆ ಹಾಯಿಸುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಸಾವಿರಾರು ರೂ. ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಪಂಪ್‌ಸೆಟ್ ಹೊಂದಿರುವ ರೈತರು ಸಹ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.
ಆತಗೂರು ಹೋಬಳಿಯಲ್ಲಿ ಮಳೆ ನಂಬಿಕೊಂಡು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಮತ್ತು ಉರುಳಿ ಒಣಗಿಹೋಗಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟವಾಗುವ ಜತೆಗೆ ಬೇಸಿಗೆಗೆ ಜಾನುವಾರುಗಳಿಗೆ ಮೇವು ಎಲ್ಲಿಂದ ತರುವುದು ಎಂದು ಚಿಂತಾಕ್ರಾಂತರಾಗಿದ್ದಾರೆ. ಏತನ್ಮಧ್ಯೆ ಕೆ.ಆರ್.ಎಸ್.ನಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಹಾಗೂ ನಾಲೆಗಳಿಗೆ ನೀರು ಹರಿಯದ ಪರಿಣಾಮ ನಾಲೆ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆ ಕೈಗೊಂಡಿದ್ದ ರೈತರ ಪಾಡು ಹೇಳತೀರದಾಗಿದೆ.
ಮದ್ದೂರು ತಾಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಈ ಸಂಬಂಧ ತಾಲೂಕಿನಲ್ಲಿ ಒಣಗಿರುವ ಬೆಳೆಗಳ ಬಗ್ಗೆ ಸರ್ವೇ ಮಾಡಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
ಟಿ.ಎನ್.ನರಸಿಂಹಮೂರ್ತಿ, ತಹಸೀಲ್ದಾರ್ ಮದ್ದೂರು
ಒಂದು ಎಕರೆಯಲ್ಲಿ 75 ತೆಂಗಿನ ಸಸಿಗಳನ್ನು ನೆಟ್ಟಿದ್ದೆ. ಆದರೆ ಮಳೆಯಾಗದ ಕಾರಣ ಮತ್ತು ನಾಲೆಯಲ್ಲಿ ನೀರು ಬರದ ಕಾರಣ ತೆಂಗಿನ ಸಸಿ ಒಣಗುತ್ತಿವೆ. ಹೀಗಾಗಿ ಟ್ರಾೃಕ್ಟರ್‌ನಲ್ಲಿ ಡ್ರಮ್ ಮೂಲಕ ನೀರು ತುಂಬಿಸಿಕೊಂಡು ಬಂದು ತೆಂಗಿನ ಗಿಡಗಳಿಗೆ ಹಾಯಿಸುತ್ತಿದ್ದು, ಸಾವಿರಾರು ರೂ. ಖರ್ಚಾಗುತ್ತಿದೆ.
ಎಚ್.ಕೆ.ಲತಾ, ರೈತ ಮಹಿಳೆ ಗೊರವನಹಳ್ಳಿ.
ಚಳಿಗಾಲದಲ್ಲೇ ಬರ ಎದುರಾಗಿದೆ. ಬೇಸಿಗೆಯಲ್ಲಿ ಇನ್ಯಾವ ಸ್ಥಿತಿ ಎದುರಾಗಬಹುದು ಎಂಬುದನ್ನು ಜ್ಞಾಪಿಸಿಕೊಂಡರೆ ಭಯವಾಗುತ್ತಿದೆ. ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನೀರನ್ನು ನಿರಂತರವಾಗಿ ತಮಿಳುನಾಡಿಗೆ ಸರ್ಕಾರ ಹರಿಸಿದ ಪರಿಣಾಮ ಜಿಲ್ಲೆಯ ರೈತರಿಗೆ ಈ ಸಮಸ್ಯೆ ಉಂಟಾಗಿದೆ.
ಲಕ್ಷ್ಮಣ್, ಅಧ್ಯಕ್ಷ ತೆಂಗು ಬೆಳೆಗಾರರ ಸಂಘ