

ಜಿ.ನಾಗರಾಜ್ ಬೂದಿಕೋಟೆ
ಕೋಲಾರದ ಮಿನಿ ಕೆಆರ್ಎಸ್ ಎಂದು ಖ್ಯಾತಿ ಪಡೆದಿರುವ ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಬೂದಿಕೋಟೆಯ ಮಾರ್ಕಂಡೇಯ ಡ್ಯಾಂ ಅನ್ನು ಅಭಿವೃದ್ಧಿ ಮಾಡದೇ ರ್ನಿಲಕ್ಷ$್ಯ ಮಾಡಿರುವುದರಿಂದ ಪ್ರವಾಸಿಗರ ಸಂಖ್ಯೆ ದಿನೆದಿನೇ ಕ್ಷೀಣಿಸುತ್ತಿದೆ.
1940ರಲ್ಲಿ ಮೈಸೂರು ಮಹಾರಾಜರು ಮೈಸೂರಿನ ಕೆಆರ್ಎಸ್ ಮಾದರಿಯಲ್ಲಿ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ಬಳಿ ಮಾರ್ಕಂಡೇಯ ಡ್ಯಾಂ ಅನ್ನು ನಿರ್ಮಿಸಿದ್ದರು. ಮಾರ್ಕಂಡೇಯ ಡ್ಯಾಂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದ್ದು, ಇದನ್ನು ನೋಡಲು ಕೋಲಾರ ಜಿಲ್ಲೆಯ ಜನ ಮಾತ್ರವಲ್ಲದೆ ಬೆಂಗಳೂರು ಸೇರಿ ನೆರೆಯ ಆಂಧ್ರ ಮತ್ತು ತಮಿಳುನಾಡಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಾರೆ. ಅದರಲ್ಲೂ ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಪ್ರವಾಸಿಗಳು ಕುಟುಂಬ ಸಮೇತ ಬಂದು ದಿನ ಕಳೆದು ಹೋಗುತ್ತಿರುತ್ತಾರೆ.
ಡ್ಯಾಂ ತುಂಬಿ ಕೋಡಿ ಹರಿದರಂತೂ ನಿತ್ಯ ಜನಜಂಗುಳಿ ತುಂಬಿ ತುಳುಕುತ್ತಿರುತ್ತದೆ. ಇದರಿಂದಾಗಿ ಸರ್ಕಾರ ಮಾರ್ಕಂಡೇಯ ಡ್ಯಾಂ ಅನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿಸಿದೆ. ಆದರೆ ಡ್ಯಾಂ ಕೇವಲ ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿದೆ ಹೊರತು ಅಲ್ಲಿ ಪ್ರವಾಸಿಗರಿಗೆ ಬೇಕಾದಂತಹ ಶೌಚಗೃಹ, ಕುಡಿಯುವ ನೀರು, ಬಿಸಿಲು ಮತ್ತು ಮಳೆಯಿಂದ ಆಶ್ರಯ ಪಡೆಯಲು ಶೆಲ್ಟರ್ ಸೇರಿ ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸಲು ಇಲಾಖೆ ಮತ್ತು ಜಿಲ್ಲಾಡಳಿತ ಮುಂದಾಗಿಲ್ಲ. ಇದರಿಂದಾಗಿ ದಿನೇ ದಿನೇ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಡ್ಯಾಂ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಡ್ಯಾಂಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗೆ ಕಳೆದ ಹಲವು ತಿಂಗಳುಗಳ ಹಿಂದೆ ಅಭಿವೃದ್ಧಿ ನೆಪದಲ್ಲಿ ಜಲ್ಲಿ ಹಾಕಿ ಹೋಗಿರುವ ಅಧಿಕಾರಿಗಳು ರಸ್ತೆಗೆ ಡಾಂಬರು ಭಾಗ್ಯ ಕಲ್ಪಿಸದ ಕಾರಣ ಜಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರು ಬಿದ್ದು, ಗಾಯ ಮಾಡಿಕೊಳ್ಳುತ್ತಿದ್ದಾರೆ. ಡ್ಯಾಂನ ಸುತ್ತಲೂ ಗಿಡ&ಗಂಟಿ ಬೆಳೆದಿದ್ದು ಅದನ್ನು ತೆಗೆಯಲು ಯಾರೂ ಮುಂದಾಗದೇ ಇರುವುದು ದುರ್ದೈವದ ಸಂಗತಿಯಾಗಿದೆ.
ಒಂದಾನೊಂದು ಕಾಲದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ಮಾರ್ಕಂಡೇಯ ಡ್ಯಾಂ ಮೂಲ ಸೌಕರ್ಯಗಳನ್ನು ಕಲ್ಪಿಸದೇ ಕಡೆಗಣಿಸಿರುವುದರಿಂದ ಜನ ಬಂದ ದಾರಿಗೆ ಸುಂಕವಿಲ್ಲ ಎಂಬತೆ ವಾಪಸ್ಸು ಹೋಗುತ್ತಿದ್ದಾರೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆ ಡ್ಯಾಂ ಬಳಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಿದೆ.
ನಾಮ್ಕಾವಸ್ತೆ ಪ್ರವಾಸಿ ಮಿತ್ರರು : ಇತ್ತ ಡ್ಯಾಂನ ಅಂದವನ್ನು ಸವಿಯಲು ಬರುವ ಜನರು ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಹೊಡೆದು ವಿಕೃತಿ ಮೆರೆಯುತ್ತಿದ್ದಾರೆ. ಬೃಹತ್ ಗಾತ್ರದ ಮರಗಳು ಕೆಳೆಗೆ ಬಿದ್ದಿದ್ದರೂ ಅದನ್ನು ತೆರವು ಮಾಡಲು ಯಾವುದೇ ಇಲಾಖೆಯವರು ಮುಂದಾಗಿಲ್ಲ. ಪ್ರವಾಸೋದ್ಯಮ ಇಲಾಖೆ ನಾಮಕಾವಸ್ತೆ ಎಂಬಂತೆ ಪ್ರವಾಸಿ ಮಿತ್ರನನ್ನು ನೇಮಿಸಿದೆಯಾದರೂ ರಜಾ ದಿನಗಳಲ್ಲಿ ಅವರು ಕಾಣ ಸಿಗುವುದಿಲ್ಲ. ಇದೆಲ್ಲವನ್ನೂ ಗಮನಿಸಿದ ಪ್ರವಾಸಿಗಳು ಒಮ್ಮೆ ಬಂದವರು ಮತ್ತೆ ಇತ್ತಕಡೆ ತಲೆ ಹಾಕುತ್ತಿಲ್ಲ.
ಮಾರ್ಕಂಡೇಯ ಡ್ಯಾಂ ಪ್ರವಾಸೋಧ್ಯಮ ಇಲಾಖೆಗೆ ಒಳಪಟ್ಟಿರುವುದರ ಜತೆಗೆ ಡ್ಯಾಂ ಬಂಗಾರಪೇಟೆ ಮತ್ತು ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಪಂಚಾಯಿತಿ ಮೂಲಕ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅದರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. | ಬಿ.ಆರ್ ಮಂಜುನಾಥ ಗ್ರಾಪಂ ಅಧ್ಯಕ್ಷ ಬೂದಿಕೋಟೆ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ಮಾರ್ಕಂಡೇಯ ಡ್ಯಾಂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಆದರೆ ಪ್ರವಾಸೋದ್ಯಮ ಇಲಾಖೆಗೆ ಒಳಪಡಿರುವಂತಹ ಡ್ಯಾಂ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಉಳಿದಿದೆ. ಡ್ಯಾಂ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ರ್ನಿಲಕ್ಷ$್ಯ ಎಸಗಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಡ್ಯಾಂ ಬಳಿ ಶೌಚಗೃಹ, ಕುಡಿಯುವ ನೀರು ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಇಲಾಖೆ ಮುಂದಾಗಬೇಕು. | ಎ.ಬಾಬು ಬೂದಿಕೋಟೆ