

ಬೆಳಗಾವಿ: ಮದ್ಯ ಸೇವನೆಗೆ ಹಣ ನೀಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಎರಡು ತುಂಡಾಗಿ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಶ್ರೀಮಂತ ಇಟ್ನಾಳೆ (50) ಕೊಲೆಯಾದ ವ್ಯಕ್ತಿ. ಕಳೆದ ಡಿ.10 ರಂದು ಈ ಘಟನೆ ನಡೆದಿದೆ. ಆರೋಪಿ ಸಾವಿತ್ರಿ ಇಟ್ನಾಳೆ(30) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ವ್ಯಕ್ತಿ ಕುಡಿತದ ಚಟಕ್ಕೆ ಒಳಗಾಗಿದ್ದರು. ಮನೆಯಲ್ಲಿ ಕುಡಿತದ ಸಲುವಾಗಿ ಹಣಕ್ಕೋಸ್ಕರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಆರೋಪಿ ಸಾವಿತ್ರಿಗೆ ನಿವೇಶನ ಮಾರಿ ಹಣ ಕೊಡುವಂತೆ ಪತಿಯು ಪೀಡಿಸುತ್ತಿದ್ದ. ಗಂಡನ ಕಿರುಕುಳ ತಾಳಲಾರದೇ ಮನೆಯ ಎದುರು ಕಟ್ಟೆಯ ಮೇಲೆ ಮಲಗಿದ್ದ ಪತಿ ಶ್ರೀಮಂತನ ಕುತ್ತಿಗೆ ಹಿಸುಕಿ, ಪ್ರಜ್ಞೆ ತಪ್ಪಿಸಿ ನಂತರ ಅವನ ದೇಹವನ್ನು ಆಯುಧದಿಂದ ಎರಡು ತುಂಡು ಮಾಡಿ ಕೊಲೆ ಮಾಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷುಕ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಒಬ್ಬಳಿಗೆ ಶವ ಸಾಗಿಸಲು ಸಾಧ್ಯವಾಗದಿದ್ದಾಗ ಗಂಡನ ದೇಹವನ್ನ ಎರಡು ಭಾಗ ಮಾಡಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಿ ಕೃಷಿ ಜಮೀನಿನಲ್ಲಿ ಎಸೆದಿದ್ದಾಳೆ. ನಂತರ ಪಕ್ಕದ ತೋಟದವರು ಶವ ನೋಡಿ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಲವು ಆಯಾಮಗಳಲ್ಲಿ ನೋಡಿದಾಗ ನಮಗೆ ಕೊಲೆ ಆರೋಪಿ ಯಾರು ಎಂಬುದು ಪತ್ತೆಹಚ್ಚಲು ಸಾಧ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಸ್ಪಿ ಡಾ.ಭೀಮಾಶಂಕರ್ ಗುಳೇದ ಪ್ರತಿಕ್ರಿಯೆ ನೀಡಿದ್ದಾರೆ.