ಪತಿಯೊಂದಿಗೆ ಜಗಳವಾಡುತ್ತಲೇ ನದಿಗೆ ಹಾರಿದ ಪತ್ನಿ!

FotoJet
Published on

ಬೇತಮಂಗಲ; ಗಂಡನೊಂದಿಗಿನ ಮನಸ್ತಾಪದಿಂದ ತವರು ಮನೆ ಸೇರಿದ್ದ ಮಹಿಳೆ ಪಾಲಾರ್​ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇತಮಂಗಲದ ಎರಡನೇ ವಾರ್ಡ್​ ನಿವಾಸಿ ಭವಾನಿ(24) ಮೃತೆ. ವಾರ್ಡ್​ನ ಶ್ರೀನಿವಾಸ್​ ಅವರ ಪುತ್ರಿ ಭವಾನಿ ಅವರನ್ನು 8 ವರ್ಷದ ಹಿಂದೆ ಮುಳಬಾಗಿಲು ತಾಲೂಕು ಅಂಗೊಂಡಹಳ್ಳಿಯ ಮೋಹನ್​ಗೆ ಮದುವೆ ಮಾಡಿ ಕೊಡಲಾಗಿತ್ತು. ದಂಪತಿಗೆ 5 ವರ್ಷದ ಹೆಣ್ಣು ಮಗು ಇದ್ದು, ಕೆಲ ತಿಂಗಳಿಂದ ಭವಾನಿ ಹಾಗೂ ಮೋಹನ್​ ಮಧ್ಯೆ ವೈಮನಸ್ಸು ಉಂಟಾಗಿತ್ತು. ಹಲವು ಬಾರಿ ರಾಜಿ ಪಂಚಾಯಿತಿ ಬಳಿಕವೂ ಅತ್ತೆ&ಮಾವನಿಂದ ಕಿರುಕುಳ ಹೆಚ್ಚಿದೆ ಎಂದು ಭವಾನಿ ಪೊಲೀಸ್​ ಠಾಣೆ ಮೇಟ್ಟಿಲೇರಿದ್ದಳು. ಮಹಿಳಾ ಸಾಂತ್ವನ ಕೇಂದ್ರದ ಮೂಲಕ ಆಪ್ತ ಸಮಾಲೋಚನೆ ನಡೆಸಲಾಗಿತ್ತಾದರೂ ಸಮಸ್ಯೆ ಜಟಿಲಗೊಂಡು, ಪುತ್ರಿಯೊಂದಿಗೆ ತವರು ಮನೆ ಸೇರಿದ್ದಳು. ವಾರದ ಹಿಂದೆ ಬೇತಮಂಗಲಕ್ಕೆ ಬಂದಿದ್ದ ಮೋಹನ್​, ಪತ್ನಿಯ ಬಳಿ ಇದ್ದ ಮಗಳನ್ನು ಕರೆದುಕೊಂಡು ಹೋಗಿದ್ದ. ಇದರಿಂದ ಭವಾನಿ ಖಿನ್ನತೆಗೆ ಒಳಗಾಗಿದ್ದಳು. ಈ ಮಧ್ಯೆ ಶನಿವಾರ ಮಧ್ಯಾಹ್ನ ಭವಾನಿಗೆ ಕರೆ ಮಾಡಿದ್ದ ಮೋಹನ್​ ಅಶ್ಲೀಲವಾಗಿ ಮಾತನಾಡಿದ್ದ. ಗಂಡನೊಂದಿಗೆ ಮೊಬೈಲ್​ನಲ್ಲಿ ಜಗಳವಾಡುತ್ತಲೇ ಮನೆಯಿಂದ 1 ಕಿಮೀ ಅಂತರದಲ್ಲಿರುವ ಡ್ಯಾಂಗೆ ಬಳಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಅಗ್ನಿಶಾಮಕ ದಳ ಶವ ಹೊರತೆಗೆದಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಬೇತಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net