ಗಂಡನ ಕೊಲೆಗೆ ಸಂಚು ರೂಪಿಸಿದ್ದೇ ಹೆಂಡತಿ

arrest
Published on

ಕುಮಟಾ: ಕಳೆದ 5 ದಿನದ ಹಿಂದೆ ದೇವಿಮನೆ ಘಟ್ಟ ಪ್ರದೇಶದಲ್ಲಿ ಪುರುಷನ ಮೃತದೇಹ ಪತ್ತೆ ಪ್ರಕರಣವನ್ನು ಕುಮಟಾ ಪೊಲೀಸರು ಭೇದಿಸಿದ್ದಾರೆ. ಇದೊಂದು ಅನೈತಿಕ ಸಂಬಂಧವಾಗಿ ನಡೆದ ಕೊಲೆ ಪ್ರಕರಣವಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬದಾಮಿ ತಾಲೂಕಿನ ಹೊಸೂರಿನ ನಿವಾಸಿ, ಕುರಿ ಕಾಯುವ ಕೆಲಸ ಮಾಡುತ್ತಿದ್ದ ಬಶೀರಸಾಬ ರಾಜಾಸಾಬ ಸಂಕನೂರ(32) ಕೊಲೆಯಾಗಿದ್ದ ವ್ಯಕ್ತಿ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ಮುಸಿಗೇರಿ ನಿವಾಸಿಗಳಾದ ಪರಶುರಾಮ ಹನುಮಪ್ಪ ಮಾದರ(23), ಬಸವರಾಜ(ಆದೇಶ) ಸಂಗಪ್ಪ ಕುಂಬಾರ(35), ಬದಾಮಿಯ ತೆಮಿನಾಳದ ರವಿ ದಾನಪ್ಪ ಮಾದರ(22) ಹಾಗೂ ಕೊಲೆಯಾದ ಬಶೀರಸಾಬನ ಪತ್ನಿ ರಾಜಮಾ ಸಂಕನೂರ(27) ಬಂಧಿತ ಆರೋಪಿಗಳು.

ಕೊಲೆಗೆ ಕಾರಣ:

ರಾಜಮಾ ಮತ್ತು ಪರಶುರಾಮ ಮಧ್ಯೆ ಅನೈತಿಕ ಸಂಬಂಧವೇ ಕೊಲೆಗೆ ಕಾರಣ. ಪರಶುರಾಮ ಮತ್ತು ರಾಜಮಾ ಸೇರಿ ಸಂಚು ರೂಪಿಸಿದ್ದರು. ಪರಶುರಾಮನ ದೊಡ್ಡಮ್ಮನ ಮಗ ರವಿ ಮಾದರ ಹಾಗೂ ಮಂಗಳೂರಿನಲ್ಲಿದ್ದ ಸ್ನೇಹಿತ ಬಸವರಾಜನ ಸಹಾಯ ಪಡೆದಿದ್ದರು.

ಬಶೀರಸಾಬನನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ಬೀಚ್ ಸುತ್ತಾಡಿಸಿ, ಬಳಿಕ ಮರಳಿ ಬರುವಾಗ ದೇವಿಮನೆ ಘಾಟ್‌ನ ಮಾಸ್ತಿಮನೆ ಕ್ಷೇತ್ರಪಾಲ ದೇವಸ್ಥಾನದ ಹತ್ತಿರ ಇಳಿದಿದ್ದಾರೆ. ದೇವಸ್ಥಾನದ ಹಿಂದುಗಡೆ ಹೋಗಿ ಅಲ್ಲಿ ಬಶೀರಸಾಬನಿಗೆ ಮದ್ಯ ಕುಡಿಸಿ ಪರಶುರಾಮ ಮತ್ತು ರವಿ ಸೇರಿಕೊಂಡು ಕಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ದೇವಸ್ಥಾನದ ಹಿಂದುಗಡೆ ಬಿಸಾಡಿ ಹೋಗಿರುವುದಾಗಿ ತನಿಖೆ ನಡೆಸಿದ ಕುಮಟಾ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net