ಜಾನಪದ ಕಲೆಯಲ್ಲಿ ಇಡೀ ಗ್ರಾಮೀಣ ಬದುಕು ಅನಾವರಣ

21sgr3
ಸಾಗರದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯಲ್ಲಿ ಪ್ರಮುಖರು ಮಾತನಾಡಿದರು. ವಿ.ಟಿ.ಸ್ವಾಮಿ, ಸತ್ಯನಾರಾಯಣ ಸಿರವಂತೆ, ದತ್ತಾತ್ರೇಯ ಭಟ್, ಗುಡವಿ ಸ್ವಾಮಿರಾವ್ ಇತರರಿದ್ದರು.
Published on

ಸಾಗರ: ನಮ್ಮ ಬದುಕಿನ ಜತೆ ಬೆಳೆದು ಬಂದಿರುವ ಜಾನಪದ ಕಲೆ ಜೀವನದ ಸ್ಫೂರ್ತಿಯಾಗಿದೆ. ಜಾನಪದ ಸಾಹಿತ್ಯ ಕೇವಲ ಮನೋರಂಜನೆಯಲ್ಲ. ಇದು ಇಡೀ ಗ್ರಾಮೀಣ ಬದುಕನ್ನು ಅನಾವರಣಗೊಳಿಸುತ್ತದೆ. ಶ್ರಮ ಸಂಸ್ಕೃತಿಯ ಪ್ರತೀಕ ಎಂದು ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಹೇಳಿದರು.

ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿದ ಅವರು, ಜಾನಪದ ಮನುಷ್ಯನ ಉಸಿರಿನ ಜತೆ ಬೆರೆತು ಹೋಗಿದೆ. ತಮ್ಮ ನೋವು-ನಲಿವುಗಳನ್ನು, ಬದುಕಿನ ಅನುಭವ ಹಂಚಿಕೊಳ್ಳಲು ಜಾನಪದ ಉತ್ತಮ ಮಾಧ್ಯಮ. ಆದರ್ಶ ಸಮಾಜ ಕಟ್ಟುವಲ್ಲಿ ಜಾನಪದ ಪ್ರಮುಖಪಾತ್ರ ವಹಿಸುತ್ತದೆ. ಪ್ರಾಚೀನ ಸಂಸ್ಕೃತಿಯನ್ನು ಹೊಂದಿರುವ ಜಾನಪದ ಕಲೆ, ಆಧುನಿಕತೆ ಅಬ್ಬರದ ನಡುವೆ ಮೂಲೆಗುಂಪಾಗುವ ಸಾಧ್ಯತೆ ಇದೆ. ಮೂಲ ಜಾನಪದವನ್ನು ಕಾಯ್ದಿಟ್ಟುಕೊಳ್ಳುವ ಕೆಲಸ ಮಾಡಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುರೇಶ್ ಜಂಬಾನಿ ಮಾತನಾಡಿ, ಜಾನಪದ ಎಂದರೆ ಆದರ್ಶ. ಮುಂದಿನ ಜನಾಂಗಕ್ಕೆ ಜಾನಪದ ಕಲೆಯನ್ನು ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಆಧುನೀಕರಣ, ನಗರೀಕರಣ, ಮೊಬೈಲೀಕರಣದ ನಡುವೆ ಜಾನಪದ ತನ್ನ ಅಂತಃಸತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಸಿರವಂತೆ ಅಧ್ಯಕ್ಷತೆ ವಹಿಸಿದ್ದರು. ದತ್ತಾತ್ರೇಯ ಭಟ್, ಗುಡವಿ ಸ್ವಾಮಿರಾವ್, ಉಮೇಶ್ ಹಿರೇನೆಲ್ಲೂರು, ಎಸ್.ಬಸವರಾಜ್, ಎಸ್.ಡಿ.ಸತ್ಯನಾರಾಯಣ, ಲಕ್ಷ್ಮಣ ಕುಗ್ವೆ, ರಾಜು ಜನ್ನೆಹಕ್ಲು, ಗಿರಿಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net