

ಯಲ್ಲಾಪುರ: ತಾಲೂಕಿನ ಮಾಗೋಡ ರಸ್ತೆಯಲ್ಲಿ ಪ್ರವಾಸಿಗರ ಹುಚ್ಚಾಟ ಜೋರಾಗಿದೆ. ಇದರಿಂದ ವಾಹನ ಸವಾರರು, ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದೆ.
ಮಾಗೋಡ ಜಲಪಾತ, ಜೇನುಕಲ್ಲುಗುಡ್ಡ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ರಸ್ತೆಯಲ್ಲೇ ಕುಡಿದು, ತಿಂದು ತೂರಾಡುತ್ತ, ಫೋಟೋ ಶೂಟ್ ನಡೆಸುತ್ತ ಗಲಾಟೆ ಮಾಡುತ್ತಿದ್ದಾರೆ.
ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಎರಡು ದಿನಗಳ ಹಿಂದೆ ಹುಬ್ಬಳ್ಳಿ ಭಾಗದ ಕೆಲ ಯುವಕರು ಕುಡಿದು ರಸ್ತೆಯಲ್ಲೇ ನಿಂತು ಮಾಗೋಡ ಬಸ್ ತಡೆದು ತೊಂದರೆ ನೀಡಿದ್ದಾರೆ.
ಮಾಗೋಡ ರಸ್ತೆಯ ಕಾಳಿಮನೆ ಕ್ರಾಸ್ನಿಂದ ಹೆಬ್ಬಾರ ಮನೆವರೆಗೆ ಬಸ್ ತಂಗುದಾಣಗಳಲ್ಲಿ ಕುಳಿತು ಮದ್ಯ ಸೇವಿಸಿ, ತಿಂದು ಬಾಟಲಿ, ಪ್ಲೇಟ್ಗಳನ್ನು ಅಲ್ಲೇ ಎಸೆದು ಹೋಗಿದ್ದಾರೆ.
ಬಸ್ಗಾಗಿ ಕಾಯುವ ಪ್ರಯಾಣಿಕರು ತಂಗುದಾಣದತ್ತ ಹೋಗಲು ಹಿಂಜರಿಯುವಂತಾಗಿದೆ.
ಸದ್ಯ ತಾಲೂಕಿನ ಸಾತೊಡ್ಡಿ, ಶಿರಲೆ, ಕಾನೂರು, ಕುಳಿಮಾಗೋಡ ಇತರ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿರುವುದರಿಂದ ಮಾಗೋಡ ಭಾಗಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
ಕಿಡಿಗೇಡಿ ಪ್ರವಾಸಿಗರಿಂದ ಸಭ್ಯ ಪ್ರವಾಸಿಗರಿಗೆ, ಸ್ಥಳೀಯರಿಗೆ ಕಿರಿಕಿರಿಯಾಗುತ್ತಿದೆ.
ಪ್ರವಾಸಿಗರಿಂದ ಉಂಟಾಗುವ ಸಮಸ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುವ ದಿನಗಳಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಗ್ರಾಮಸ್ಥರು ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಕೂಡ ಒತ್ತಾಯಿಸಿದ್ದರು.
ಪಿಐ ಸ್ಪಂದನೆ: ಪ್ರವಾಸಿಗರಿಂದ ಉಂಟಾಗುತ್ತಿರುವ ತೊಂದರೆ ಕುರಿತು ಗ್ರಾಮಸ್ಥರು ಪೊಲೀಸ್ ನಿರೀಕ್ಷಕರ ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಪಂದಿಸಿದ್ದು, ಮಾಗೋಡ ಭಾಗಕ್ಕೆ ಸಿಬ್ಬಂದಿಯನ್ನು ಕಳುಹಿಸಿ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿದ್ದಾರೆ. ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಪ್ರವಾಸಿಗರ ಮೋಜು-ಮಸ್ತಿಯಿಂದ ಉಂಟಾಗಿರುವ ತೊಂದರೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಸಿಬ್ಬಂದಿಯನ್ನು ನೇಮಿಸಿ, ಪ್ರವಾಸಿಗರ ವರ್ತನೆ ಬಗೆಗೆ ನಿಗಾ ಇಡಲಾಗುವುದು.| ರಂಗನಾಥ ನೀಲಮ್ಮನವರ, ಪೊಲೀಸ್ ನಿರೀಕ್ಷಕರು ಯಲ್ಲಾಪುರ