ಐಯ್ಯನ ಬಾವಿಗೆ ಚತುಷ್ಪಥವೇ ಕುತ್ತು

Iyyana Bavi-NH Road Work Sept.2020 (3)
Published on

ತಿಪಟೂರು: ಸಾರ್ವಜನಿಕರ ಸುರಕ್ಷಿತ ಪ್ರಯಾಣ ಮತ್ತು ತ್ವರಿತ ಸಾಗಣೆ ದೃಷ್ಟಿಯಿಂದ ತುಮಕೂರಿನಿಂದ ಶಿವಮೊಗ್ಗದವರೆಗೂ 206 ಕಿ,ಮೀ ಉದ್ದದ ಚತುಷ್ಪಥ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ರಸ್ತೆ ಬದಿ ಬೆಳೆದು ನಿಂತಿದ್ದ ಬೃಹತ್ ಮರಗಳ ಮಾರಣಹೋಮ ನಡೆದಿದ್ದು, ಜತೆಗೆ ತಾಲೂಕಿನ ಐತಿಹಾಸಿಕ ಐಯ್ಯನ ಬಾವಿಗೂ ಕುತ್ತು ಬಂದಿದೆ.

2018ರ ಡಿಸೆಂಬರ್ 16ರಂದು ರಸ್ತೆ ಕಾಮಗಾರಿಗೆ ಚಾಲನೆ ದೊರೆತಿದ್ದು, 3,500 ಕೋಟಿ ರೂ. ವೆಚ್ಚದ ಕಾಮಗಾರಿ ಪೈಕಿ ತುಮಕೂರಿನಿಂದ ತಾಲೂಕಿನ ಕೊನೇಹಳ್ಳಿ ಗಡಿಗ್ರಾಮದವರೆಗಿನ ಅಂದಾಜು ವೆಚ್ಚ 2700 ಕೋಟಿ ರೂ. ಎನ್ನಲಾಗಿದೆ. ಇದಕ್ಕಾಗಿ ತಾಲೂಕಿನ ಹತ್ತಿಹಾಳು ಬೆಟ್ಟದಿಂದ ಗಡಿಗ್ರಾಮದವರೆಗಿನ ರಸ್ತೆ ಬದಿಯ ಒಟ್ಟು 3524ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಐಯ್ಯನ ಬಾವಿ ಪಕ್ಕದಲ್ಲೇ ಉದ್ದೇಶಿತ ರಸ್ತೆ ಕಾಮಗಾರಿ ನಡೆದಿರುವುದರಿಂದ ಐಯ್ಯನ ಬಾವಿಗೆ ಬಂದು ಸೇರುತ್ತಿದ್ದ ಮಳೆ ನೀರಿನ ಮೂಲಗಳಿಗೆ ತಡೆ ಒಡ್ಡಲಾಗಿರುವ ಪರಿಣಾಮ ಪ್ರಸ್ತುತ ಬೀಳುತ್ತಿರುವ ಮಳೆ ಅಂದಾಜಿನಲ್ಲಿ ಒಂದು ವಾರದೊಳಗೆ ತುಂಬಬೇಕಿದ್ದ ಐಯ್ಯನವಾವಿ ನೀರಿನ ಮೂಲ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹತ್ತಾರು ಗ್ರಾಮಗಳ ಜನ, ಜಾನುವಾರುಗಳಿಗೆ ನೀರಿನ ಅಭಾವ ಎದುರಾಗಲಿದೆ.

ಐಯ್ಯನಬಾವಿಯ ಇತಿಹಾಸ: ತಾವು ಸಂಚರಿಸಿದ ಜಾಗದಲ್ಲೆಲ್ಲ ಜನ, ಜಾನುವಾರುಗಳಿಗೆ ನೀರಿನ ಆಶ್ರಯಕ್ಕಾಗಿ ಕೆರೆಗೋಡಿ-ರಂಗಾಪುರದ 7ನೇ ತಲೆಮಾರಿನ ಶ್ರೀಗಳು ಬಾವಿಗಳನ್ನು ಕಟ್ಟಿಸುತ್ತಿದ್ದರು, ಅಂತೆಯೇ ಈ ಭಾಗದಲ್ಲಿ ಸಂಚರಿಸುತ್ತಿದ್ದಾಗ ಕುದುರೆ ಕೆನೆದ ಸೂಚನೆ ಅನುಸಾರ ಇಲ್ಲಿ ಬಾವಿ ನಿಮಾರ್ಣಕ್ಕೆ ಚಾಲನೆ ನೀಡಿದ್ದರು ಎನ್ನಲಾಗಿದೆ. ಬಾವಿ ನಿರ್ಮಿಸುವ ಕೂಲಿ ಆಳುಗಳಿಗೆ ಸಂಭಾವನೆ ಕೊಡುವಾಗ ಶ್ರೀಗಳು, ಬಾವಿಯ ಪಕ್ಕದಲ್ಲಿರುವ ಹುತ್ತಕ್ಕೆ ಕೈ ಹಾಕಿ ಅದರಿಂದ ಬಂದ ನಾಣ್ಯಗಳನ್ನು ನೀಡುತ್ತಿದ್ದರು, ಶ್ರಮಪಟ್ಟು ದುಡಿಯುವ ಕೂಲಿ ಆಳುಗಳಿಗೆ ಹಿಡಿ ತುಂಬ ನಾಣ್ಯ, ಮೈಗಳ್ಳರಿಗೆ ಅರ್ಧ ಹಿಡಿ, ಮತ್ತು ಗರ್ಭಿಣಿಯರಿಗೆ ಎರಡು ಹಿಡಿ ನಾಣ್ಯ ಸಿಗುತ್ತಿತ್ತು ಎನ್ನಲಾಗಿದೆ. ಬಾವಿಯನ್ನು ಐಯ್ಯನವರು ನಿರ್ಮಿಸಿದ್ದರಿಂದ ಇಲ್ಲಿನ ದನ ಮೇಯಿಸುವ ಹುಡುಗರು ಬಾವಿಗೆ ಇಟ್ಟ ಹೆಸರೇ ಐಯ್ಯನ ಬಾವಿ ಎಂದು ಪ್ರಸಿದ್ದವಾಗಿದೆ.

150್ಡ200 ಅಡಿ ವಿಸ್ತೀರ್ಣದ ಬಾವಿಯ ಆಳ ಪ್ರಸ್ತುತ 60-70 ಅಡಿ ಇದ್ದರೂ, ಬಾವಿಯ ಒಳಗೆ ಇನ್ನೂ ಮೂರು ಬಾವಿಗಳ ನಿರ್ಮಾಣವಾಗಿದೆ ಎನ್ನಲಾಗಿದೆ. ಮಾಜಿ ಶಾಸಕ ಕೆ.ಷಡಕ್ಷರಿ ಬಾವಿಯ ಹೂಳು ತೆಗೆಸುವ ಪ್ರಯತ್ನಕ್ಕೆ ಕೈ ಹಾಕಿದರೂ ಹಾಲಿ ಶ್ರೀಗಳಾದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಅಪ್ಪಣೆ ದೊರೆಯಲಿಲ್ಲ ಎನ್ನಲಾಗಿದೆ. ಒಮ್ಮೆ ಬಾವಿ ತುಂಬಿದರೆ 3 ವರ್ಷ ಸುತ್ತಲ ಹತ್ತಾರು ಗ್ರಾಮಗಳ ಜನ, ಜಾನುವಾರುಗಳಿಗೆ ನೀರಿಗೆ ಕೊರತೆ ಇಲ್ಲ. ಮತ್ತು ಕೊಳವೆ ಬಾವಿಗಳ ನೀರಿನ ಮಟ್ಟವು ಹೆಚ್ಚುತ್ತೆ ಎನ್ನಲಾಗಿದೆ. ಬಾವಿಯಲ್ಲಿ ಕೇವಲ ಗಂಗಮ್ಮನನ್ನು ಮಾಡಲು ಮತ್ತು ಗಣಪತಿ ಮೂರ್ತಿ ವಿಸರ್ಜಿಸಲು ಅವಕಾಶವಿದ್ದು, ಶ್ರೀಗಳ ಅನುಮತಿ ಅಗತ್ಯ.

ಬಾವಿಯ ವೈಶಿಷ್ಟ್ಯ ! : ಇಲ್ಲಿವರೆಗೂ ಈ ಬಾವಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಕಲ್ಲು ಎಸೆಯುವಲ್ಲಿ ಯಾರೂ ಸಫಲರಾಗಿಲ್ಲ. ಬಾವಿ ಖಾಲಿ ಇದ್ದಾಗಲೂ ಇದು ಸಾಧ್ಯವಾಗಿಲ್ಲ. ಇನ್ನೊಂದು ವಿಶೇಷವೆಂದರೆ ವರನಟ ದಿ.ಡಾ.ರಾಜ್‌ಕುಮಾರ್ ತಮ್ಮ ಆಪ್ತ ಗೆಳೆಯ ನಗರದ ರಾಮಸ್ವಾಮಿ ಅವರನ್ನು ಭೇಟಿಯಾಗಲು ಬಂದಾಗಲೆಲ್ಲ ಸಂಜೆ ಇದೇ ಬಾವಿಯ ಕಲ್ಲಿನ ಮೇಲೆ ಕುಳಿತು ಹರಟುತ್ತಿದ್ದರು. ಯಾತ್ರಾ ಕ್ಷೇತ್ರವಾಗಬೇಕಿದ್ದ ಈ ಐಯ್ಯನ ಬಾವಿ, ಪ್ರಸ್ತುತ ರಸ್ತೆ ಕಾಮಗಾರಿಗೆ ಬಲಿಯಾಗಿ ನೀರಿನ ಮೂಲ ಕಳೆದುಕೊಂಡು ಐತಿಹಾಸಿಕ ಮಹತ್ವ ಕಳೆದುಕೊಳ್ಳುವ ಮುಂಚೆ ತಾಲೂಕು ಆಡಳಿತ, ಅಥವಾ ಸಂಬಂಧಪಟ್ಟ ಇಲಾಖೆ ಬಾವಿಯನ್ನು ರಕ್ಷಿಸಬೇಕಿದೆ.

ಬಾವಿಯ ಇತಿಹಾಸದ ಬಗ್ಗೆ ತಿಳಿದಿರಲಿಲ್ಲ. ಮಳೆ ನೀರು ಶೇಖರಣೆ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಜನರಿಗೆ ಉಪಯೋಗವಾಗುವ ರೀತಿ ಕ್ರಮಕ್ಕೆ ಯೋಚಿಸಲಾಗುವುದು. ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತೆ. ಶ್ರೀನಿವಾಸ ರಾವ್ ಟೀಂ ಲೀಡರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಪಟೂರು ವಲಯ ನನ್ನ ಅಧಿಕಾರ ಅವಧಿಯಲ್ಲಿ ಬಾವಿಯ ಪುನಶ್ಚೇತನಕ್ಕೆ ಪ್ರಯತ್ನಿಸಿದ್ದೆ. ಆದರೆ, ರಂಗಾಪುರ ಶ್ರೀಗಳು ಒಪ್ಪಿಗೆ ನೀಡಲಿಲ್ಲ. ಈ ಬಾವಿಗೆ ತನ್ನದೇ ಆದ ಇತಿಹಾಸ ಇದೆ. ಕೆ. ಷಡಕ್ಷರಿ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net