

ಅರಕೇರಾ: ಸಮಾಜದ ಅಂಕುಡೊಂಕು ತಿದ್ದುವಲ್ಲಿ ಬಸವಾದಿ ಶರಣರ ಶ್ರಮ ಮಹತ್ವದ್ದಾಗಿದೆ. ಸಾಮಾಜಿಕ ಅಸಮಾನತೆ, ಮೌಢ್ಯತೆ, ಅಂಧಕಾರ ನಿವಾರಣೆಗೆ ವಚನಗಳ ಮೂಲಕ ಅರಿವು ಮೂಡಿಸಿದ್ದಾರೆ ಎಂದು ಬೀದರ್ ಜಿಲ್ಲೆ ಹುಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದ ನೀಲಾಂಬಿಕಾ ಬಸವ ಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ 4ನೇ ವರ್ಷದ ಶರಣ ವಚನ ವಿಜಯೋತ್ಸವ ಹಾಗೂ 73ನೇ ಬಸವ ತತ್ವ ಚಿಂತನಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ತನ್ನ ಹಿತಕ್ಕಾಗಿ ಇನ್ನೊಬ್ಬರ ನೋಯಿಸಿ ಗಂಗೆಯಲ್ಲಿ ಮಿಂದೆದ್ದರೇನು ಫಲ. ಪರರ ಹಿತ ಕಾಯುವುದು ಮನುಷ್ಯ ಧರ್ಮ. ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸಬೇಕು ಎಂದರು.
ಚಿತ್ರದುರ್ಗದ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ‘ಇವ ನಮ್ಮವ ಇವ ನಮ್ಮವ’ ಎಂದು ಅಪ್ಪಿಕೊಂಡರೋ ಆಗ ಎಲ್ಲ ಜಾತಿ ಜನಾಂಗದ 1.90 ಲಕ್ಷ ಜನ ಅನುಭವ ಮಂಟಪದಲ್ಲಿ ಸೇರಿದರು. ಶರಣರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಬೇಕು. ಆಗ ಸಂಸ್ಕಾರಯುತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಬಸವ ಕೇಂದ್ರದ ಗೌರವಾಧ್ಯಕ್ಷ ಡಾ.ಬಸವಪ್ರಭು ಮಾತನಾಡಿ, ಸಮಾಜ ನಾಲ್ಕು ಭಾಗವಾಗಿ ಛಿದ್ರವಾಗಿದ್ದಾಗ ಬಸವಣ್ಣನವರು ಉದಯಿಸಿದರು. ತಳ ಸಮುದಾಯದವರೊಂದಿಗೆ ಬಸವಣ್ಣ ಸಮಾಜ ಕಟ್ಟಿದರು. ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನು ಕಲಿಸಿದರು. ಕಾಯಕ ಮಾಡುವುದನ್ನು ಕಲಿಸಿದರು. ಸಮ ಸಮಾಜದ ನಿರ್ಮಾಣ ಬಸವಣ್ಣನವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸಲು ವಚನ ಓದಬೇಕು, ಅದರಂತೆ ನಡೆಯಬೇಕು ಎಂದರು.ಬೆಟ್ಟಪ್ಪ ಕಸ್ತೂರಿ ಹಾಗೂ ಸಂಗಡಿಗರು ಸಮಗಾರ ಹರಳಯ್ಯ ಎಂಬ ನಾಟಕ ಪ್ರದರ್ಶಿದರು. ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಉಪನ್ಯಾಸಕಿ ವಿದ್ಯಾವತಿ ಹಿರೇಮಠ, ಪ್ರಮುಖರಾದ ಕರೇಗೌಡ ಪೊಲೀಸ್ ಪಾಟೀಲ್ ಕುರುಕುಂದ, ನಾಗಭೂಷಣ ನವಲಿ, ಶಾಂತಪ್ಪ ಚಿಂಚರಕಿ, ಅಮರೇಶ್ ಗವಿಗಟ್ಟ, ಬಸವಲಿಂಗಪ್ಪ ಬಾದರ್ಲಿ, ಶರಣಬಸವ ನೀರಮಾನ್ವಿ ಇತರರಿದ್ದರು.