ಮಳೆಗೆ ಮುಳಗುಂದ ವಾರದ ಸಂತೆ ಆಪೋಶನ

MUL RAIN
Published on

ಮುಳಗುಂದ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಜೋರಾದ ಮಳೆ ಸುರಿಯಿತು. ಪರಿಣಾಮ ವಾರದ ಸಂತೆ ಅಸ್ತವ್ಯಸ್ತವಾಯಿತು. ಕೆಲ ಹೊಲಗಳಲ್ಲಿನ ಬದುವುಗಳು ಕೊಚ್ಚಿ ಹೋಗಿ ಹಾನಿಯಾಗಿದೆ.

ಮೃಗಶಿರ ಮಳೆ ಆರಂಭವಾಗಿ ನಾಲ್ಕು ದಿನ ಕಳೆದಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ. ಬುಧವಾರ ಸಂಜೆ ಮೂರು ತಾಸಿಗೂ ಹೆಚ್ಚು ಕಾಲ ಬಿರುಸಾಗಿ ಮಳೆ ಸುರಿಯಿತು. ಚರಂಡಿಗಳು ತುಂಬಿ ಹರಿದವು. ವಾರದ ಸಂತೆ ನಡೆಯುವ ಎಪಿಎಂಸಿ ಆವರಣದಲ್ಲಿ ಸಾಕಷ್ಟು ಪ್ರಮಾಣದ ನೀರು ತುಂಬಿತು. ತರಕಾರಿ ವ್ಯಾಪಾರಸ್ಥರು, ಗ್ರಾಹಕರು ಪರದಾಡಿದರು. ಸಾರ್ವಜನಿಕರು ಶೆಡ್​ನಲ್ಲಿ ಆಶ್ರಯ ಪಡೆದರು. ಹೊರ ಆವರಣದಲ್ಲಿ ನೀರು ನಿಂತ ಕಾರಣ ವ್ಯಾಪಾರಕ್ಕೆ ತೊಂದರೆ ಉಂಟಾಗಿತ್ತು.

ಜೋರು ಮಳೆಯಿಂದಾಗಿ ಕೃಷಿ ಭೂಮಿ ತೇವವಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಸ್ಥಗಿತಗೊಂಡು ರೈತರು ಮನೆಯತ್ತ ಮರಳಿದರು. ರಾತ್ರಿಯಿಡಿ ಜಿಟಿ ಜಿಟಿ ಮಳೆ ಮುಂದುವರಿದು ಗುರುವಾರವೂ ಜೋರಾದ ಮಳೆ ಸುರಿಯಿತು.

ಸತತ ಮಳೆ ಸುರಿದ ಪರಿಣಾಮ ಕುರ್ತಕೋಟಿ ರಸ್ತೆ ಕೆಲ ಹೊಲಗಳಲ್ಲಿ ಅಧಿಕ ಪ್ರಮಾಣದ ನೀರು ನಿಂತು ಬದುವು ಕೊಚ್ಚಿ ಹೋಗಿ ಹಾನಿಗೀಡಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net