ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನ ಅನುಪಲ್ಲಿ&ಬುರುಡುಗುಂಟೆ ಮಾರ್ಗಮಧ್ಯೆ ಖಾಸಗಿ ಶಾಲಾ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದು, ಮಗುವೊಂದು ತೀವ್ರವಾಗಿ ಗಾಯಗೊಂಡಿದೆ.
ತಾಲೂಕಿನ ಚಿಲಕಲನೇರ್ಪು ಗ್ರಾಮದ ನಿವಾಸಿ ಬಾಲಾಜಿ(30), ಅವರ ಮಾವ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೊಳ್ಳದ ಟಿ.ಎನ್.ವೆಂಕಟೇಶಪ್ಪ (55) ಮತ್ತು ಬಾಲಾಜಿ ಮಕ್ಕಳಾದ ಹರೀಶ್ (11) ಮತ್ತು ಆರ್ಯ (8) ಮೃತರು. ಶಿವಾನಿ (6)ಗೆ ತೀವ್ರಗಾಯವಾಗಿದ್ದು, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಲಕಲನೇರ್ಪು ಗ್ರಾಮದಿಂದ ಶಿಡ್ಲಟ್ಟ ತಾಲೂಕಿನ ತಲಕಾಯಲಬೆಟ್ಟಕ್ಕೆ ಮದುವೆಗೆಂದು ಗುರುವಾರ ಸಂಜೆ ಬೈಕ್ನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಶಾಲಾ ವಾಹನದ ಮುಂಭಾಗ ಜಖಂಗೊಂಡರೆ, ಬೈಕ್ ಎರಡು ಭಾಗವಾಗಿದೆ. ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಗಾಯಾಳು ಮತ್ತು ಮೃತ ದೇಹಗಳನ್ನು
ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.