

ಕೆ.ಆರ್.ಪೇಟೆ: ವಿದ್ಯೆ ಜ್ಞಾನದ ಬೆಳಕಿನ ಶಕ್ತಿ. ಇದು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಶ್ರದ್ಧೆಯಿಂದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು ಎಂದು ಕೃಷ್ಣರಾಜಪೇಟೆ ಕೆಪಿಎಸ್ ಸ್ಕೂಲ್ ಪ್ರಾಂಶುಪಾಲ ಡಿ.ಬಿ.ಸತ್ಯ ಹೇಳಿದರು.
ತಾಲೂಕಿನ ಬೂಕನಕೆರೆ ಹೋಬಳಿ ವಿಠಲಾಪುರ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದರು.
ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಗೆ ಅಪಾರ ಬೇಡಿಕೆಯಿದೆ. ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸಿ ಸ್ವಾಭಿಮಾನದ ಜತೆಗೆ ಆತ್ಮವಿಶ್ವಾಸ ತುಂಬುವ ವಿದ್ಯೆಗೆ ಅಪಾರ ಶಕ್ತಿಯಿದೆ. ವಿದ್ಯಾರ್ಥಿಗಳು ತಲೆಬಗ್ಗಿಸಿ ಪಾಠ ಪ್ರವಚನಗಳನ್ನು ಅಭ್ಯಾಸ ಮಾಡಿದರೆ ಜೀವಪರ್ಯಂತ ತಲೆಎತ್ತಿ ಜೀವನ ನಡೆಸುವಂತಹ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ಮೊಬೈಲ್ ಫೋನ್, ಫೇಸ್‌ಬುಕ್, ವಾಟ್ಸ್‌ಆ್ಯಪ್, ಚಾಟಿಂಗ್‌ನಿಂದ ದೂರವಿದ್ದು, ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದಿ ಜ್ಞಾನವಂತರಾಗಬೇಕು. ವಿದ್ಯೆಯನ್ನು ಯಾರೂ ನಮ್ಮಿಂದ ಕದಿಯಲು ಸಾಧ್ಯವಿಲ್ಲ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಹಣ, ಆಸ್ತಿ ಮಾಡುವ ಬದಲಿಗೆ ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜಕ್ಕೆ ಆಸ್ತಿಯನ್ನಾಗಿ ಕೊಡುಗೆಯಾಗಿ ನೀಡಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಎಂ.ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿಹರಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಶಫೀ ಅಹಮದ್, ಉಪನ್ಯಾಸಕರಾದ ಡಿ.ಎಂ.ವಿನಾಯಕ, ಆರ್.ಬಿ.ಪದ್ಮನಾಭ, ಟಿ.ವೈ.ಪುಷ್ಪಾ, ಶಕುಂತಲಾ ಮಂಜುನಾಥ್, ಪ್ರಗತಿಪರ ಕೃಷಿಕರಾದ ವಿಠಲಾಪುರ ಸುಬ್ಬೇಗೌಡ, ಡಾ.ಕೆ.ಕಾಳೇಗೌಡ, ಮತ್ತಿಘಟ್ಟ ಚಂದ್ರಶೇಖರ್ ಇದ್ದರು.
ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಅತೀ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.