

ಶಿರಸಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಬುಧವಾರ ಗಣಹವನ ನಡೆಯಿತು.
ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಎರಡು ಮಣ್ಣಿನ ಗಣಪತಿಯನ್ನು ಪೂಜಿಸಿ, ಅರ್ಚಿಸಲಾಯಿತು. ಶ್ರೀ ಮಠದ ಆರಾಧ್ಯ ದೇವರುಗಳಲ್ಲಿ ಒಂದಾದ ರತ್ನಗರ್ಭ ಗಣಪತಿಗೆ ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಸಾಯಂಕಾಲ ಶಮಂತಕೋಪಾಖ್ಯಾನ ಕಥಾ ಪ್ರವಚನವು ನೆರವೇರಿತು.
ಅಬ್ಬರದ ಮಳೆಯಲ್ಲೂ ಕುಂದದ ಉತ್ಸಾಹ: ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆಯಬ್ಬರ ಜೋರಾಗಿದೆ. ಸುರಿಯುವ ಮಳೆಯನ್ನೂ ಲೆಕ್ಕಿಸದೇ ಸಾರ್ವಜನಿಕರು ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಅಲಂಕರಿಸಿ ಪೂಜಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನತೆ ಮಳೆಯ ಮಧ್ಯೆಯೂ ಸಣ್ಣ ಆಕಾರದ ಗಣೇಶ ಮೂರ್ತಿಗಳನ್ನು ತಂದು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಗಣೇಶನಿಗೆ ಚೌತಿಯ ವಿಶೇಷ ಪೂಜೆ ಹಾಗೂ ಗುರುವಾರ ಋಷಿ ಪಂಚಮಿಯ ಪೂಜೆ ಸಲ್ಲಿಸಿ ಸಂಜೆ ವಿಸರ್ಜನೆ ಮಾಡಲಾಗಿದೆ.