

ನಾಲವಾರ: ನೀರು ಸರಬರಾಜು ಟ್ಯಾಂಕ್‌ನಲ್ಲಿ ಎರಡು ಹಾವುಗಳು ಸತ್ತು ಬಿದ್ದಿದೆ ಎಂಬ ಸುಳ್ಳು ಸುದ್ದಿಯಿಂದಾಗಿ ಮನೆಯಲ್ಲಿ ಶೇಖರಿಸಿಟ್ಟಿದ್ದ ನೀರನ್ನೆಲ್ಲ ಸಾರ್ವಜನಿಕರು ರಸ್ತೆಗೆ ಚಲ್ಲಿದ ಘಟನೆ ಗುರುವಾರ ಬೆಳಗ್ಗೆ ಜರುಗಿದೆ.
ಲಾಡ್ಲಾಪುರ ಗ್ರಾಮದಲ್ಲಿ ಜನರು ಎಂದಿನAತೆ ಬೆಳಗ್ಗೆ ನಳದ ನೀರನ್ನು ತುಂಬುತ್ತಿದ್ದರು. ಈ ವೇಳೆ ಹಾವಿನ ಪೊರೆಯನ್ನು ಹೊಲುವ ಪದಾರ್ಥ ಬಂದಿದೆ. ಇದರಿಂದಾಗಿ ಕೆಲ ಯುವಕರು ವಾಟರ್ ಟ್ಯಾಂಕ್ ಹತ್ತಿ ಇಣುಕಿ ನೋಡಿದ್ದಾರೆ. ಎರಡು ಹಾವುಗಳು ಸತ್ತು ಬಿದ್ದ ರೀತಿಯಲ್ಲಿ ಕಾಣಿಸಿದೆ. ಕೂಡಲೇ ಇದನ್ನು ಗ್ರಾಮದೆಲ್ಲೆಡೆ ಹೇಳಿಕೊಂಡು ತಿರುಗಾಡಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿ ಸಿಬ್ಬಂದಿಯೂ ನೀರು ಕುಡಿಯದಂತೆ ಸೂಚನೆ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ದಲಿತ ಬಡಾವಣೆ, ಹನುಮಾನ ನಗರ, ನಿಜಾಮ್ ಬಂಡಿ, ಬಸ್ ನಿಲ್ದಾಣ ಪ್ರದೇಶ ಸೇರಿ ಇನ್ನಿತರ ಪ್ರದೇಶದಲ್ಲಿನ ಮನೆಗಳಲ್ಲಿ ಬೆಳಗ್ಗೆ ಶೇಖರಿಸಿಟ್ಟುಕೊಂಡಿದ್ದ ನೀರನ್ನೆಲ್ಲ ರಸ್ತೆ ಚಲ್ಲಿದ್ದಾರೆ. ಟ್ಯಾಂಕ್ ಸ್ವಚ್ಛಗೊಳಿಸದಿರುವುದರಿಂದ ಇಂತಹ ಘಟನೆ ಆಗುತ್ತಿವೆ ಎಂದು ಜನರು ಕಿಡಿಕಾರಿದರು.
ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲ ಕಟ್ಟಿಮನಿ ಅವರು ಸಿಬ್ಬಂದಿ ಸಮೇತ ಟ್ಯಾಂಕ್ ಹತ್ತಿ ಪರಿಶೀಲನೆ ನಡೆಸಿದರು. ನೀರಿನಲ್ಲಿ ಬಿದ್ದಿರುವುದು ಹಾವುಗಳಲ್ಲ ಗೊಬ್ಬರ ಗಿಡದ ಕಾಯಿಗಳು. ಅವು ನೋಡಲು ಹಾವಿನ ಮರಿಯಂತೆ ಕಾಣುತ್ತವೆ. ಹೀಗಾಗಿ ಸಮಸ್ಯೆ ಆಗಿದೆ. ಟ್ಯಾಂಕ್ ಅನ್ನು ಸಂಪೂರ್ಣ ಸ್ವಚ್ಛ ಮಾಡಲಾಗಿದ್ದು, ಯಾರು ಭಯಪಡಬೇಕಿಲ್ಲ ಎಂದು ಹೇಳಿದರು.