ಸಂತೆ ಹಳ್ಳದ ನೀರು... ಮಾಸಣಗಿ, ಅಂಗರಗಟ್ಟಿ ರೈತರ ಬೆಳೆ ಹಾಳು

Sante Halla in byadagi
Published on

ಬ್ಯಾಡಗಿ: ತಾಲೂಕಿನ ಮಾಸಣಗಿ ಅಂಗರಗಟ್ಟಿ- ಮಾಸಣಗಿ ಮಾರ್ಗ ಮಧ್ಯದಲ್ಲಿರುವ ಸಂತೆ ಹಳ್ಳಕ್ಕೆ ಸೂಕ್ತ ಸೇತುವೆ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.

ಪ್ರತಿ ಬಾರಿ ಮಳೆ ಬಂದಾಗ ಹಳ್ಳದ ನೀರು ಇಕ್ಕೆಲದಲ್ಲಿನ ಜಮೀನುಗಳಿಗೆ ನುಗ್ಗಿ ನೂರಾರು ಎಕರೆಯಲ್ಲಿನ ಬೆಳೆಗೆ ಹಾನಿಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಕ್ಷಣ ಸಂತೆ ಹಳ್ಳಕ್ಕೆ ಸೇತುವೆ ನಿರ್ವಿುಸಬೇಕು ಎಂದು ಮಾಸಣಗಿ ಅಂಗರಗಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮಸ್ಥರು ಮೇಲ್ಸೆತುವೆ ನಿರ್ವಿುಸಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.

ಕಳೆದ ವರ್ಷ ಮಳೆಯಾದಾಗ ಈ ರಸ್ತೆಯಲ್ಲಿ ನೀರು ನಿಂತು ಗ್ರಾಮಸ್ಥರಿಗೆ ಓಡಾಡಲು ಕಷ್ಟವಾಗಿತ್ತು. ಆಗ ರೈತರು ಪ್ರತಿಭಟನೆ ನಡೆಸಿದ್ದರು. ನಂತರತ ತಾತ್ಕಾಲಿಕವಾಗಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಮೆಂಟ್ ಪೈಪ್ ಹಾಕಲಾಗಿತ್ತು. ಆದರೆ, ಅವು ಕೆಲವೇ ತಿಂಗಳಲ್ಲಿ ಹಾಳಾದವು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಳೆದ ಪೈರು ನೀರಿನಲ್ಲಿ:

ಈ ಬಾರಿ ಸುರಿದ ಅತಿಯಾದ ಮಳೆಯಿಂದ ಮಾಸಣಗಿ, ಅಂಗರಟ್ಟಿ ಸೇರಿ ಹಳ್ಳಕ್ಕೆ ಹೊಂದಿಕೊಂಡ ನೂರಾರು ಎಕರೆ ಜಮೀನುಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ಬದುವಿನ ಮಣ್ಣು ಕೊಚ್ಚಿ ಹೋಗಿದೆ. ಈಗ ಅಲ್ಪಸ್ವಲ್ಪ ಬೆಳೆದಿದ್ದ ಬೆಳೆ ಕೂಡ ಕೈಗೆ ಸಿಗದಂತಾಗಿದೆ. ಇಂಜಿನಿಯರ್​ಗಳು ಸ್ಥಳಕ್ಕೆ ಬಂದು ನೋಡುತ್ತಿಲ್ಲ. ಈ ರಸ್ತೆ ತಿಳವಳ್ಳಿವರೆಗೂ ಇದ್ದು ಎಲ್ಲಿ ನೋಡಿದರಲ್ಲಿ ತಗ್ಗು- ಗುಂಡಿಗಳೇ ಕಾಣುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಗುಂಡಿಗಳನ್ನೂ ಮುಚ್ಚುತ್ತಿಲ್ಲ.

ಊರಿನ ಪಕ್ಕದಲ್ಲಿರುವ ಸಂತೆ ಹಳ್ಳದ ನೀರು ನುಗ್ಗಿ ರಸ್ತೆ ಕಿತ್ತುಹೋದ ಪರಿಣಾಮ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸಿದ್ದಾರೆ. ತಿಳವಳ್ಳಿ, ಆನವಟ್ಟಿ, ಚಿಕ್ಕಬಾಸೂರು ಕಡೆಗೆ ತೆರಳುವ ವಾಹನಗಳು 10 ಕಿಮೀ. ಸುತ್ತುವರಿದು ಮಲ್ಲೂರು ಮೂಲಕ ತೆರಳಬೇಕಿದೆ.

ರಾತ್ರಿ ಹೊತ್ತು ಚಾಲಕರ ಗೋಳಾಟ:

ಈ ಹಿಂದೆ ಸಂತೆ ಹಳ್ಳದ ಬಳಿ 5 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕವಾಗಿ ನಾಲ್ಕು ಸಿಮೆಂಟ್ ಪೈಪ್ ಹಾಕಿ ಮೇಲೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹತ್ತಾರು ಗ್ರಾಮಗಳ ನೀರು ಹರಿದು ಬರುತ್ತದೆ. ಇಳಿಜಾರಿನ ಗುಡ್ಡದ ಪ್ರದೇಶದಿಂದ ರಭಸವಾಗಿ ರಸ್ತೆ ಮೂಲಕ ನೀರು ಹರಿದು ಬರುತ್ತದೆ. ಅಲ್ಲಿ ಕೂಡ ದೊಡ್ಡ ಪೈಪ್​ಗಳನ್ನು ಅಳವಡಿಸಬೇಕಿತ್ತು ಎಂಬುದು ರೈತರ ಆಗ್ರಹವಾಗಿದೆ. ಮಳೆ ಬರುತ್ತಿದ್ದಂತೆ ರಾತ್ರಿ ಹೊತ್ತಲ್ಲಿ ಬೈಕ್, ಕಾರು, ಆಟೋ ಚಾಲಕರು ಸೇತುವೆ ದಾಟಲು ಹರಸಾಹಸ ಪಡುವಂತಾಗಿದೆ. ಪಕ್ಕದಲ್ಲಿ ಬೃಹತ್ ಗುಂಡಿಗಳಿದ್ದು, ನಿರ್ಲಕ್ಷಿಸಿದರೆ ಪ್ರಾಣಕ್ಕೂ ಅಪಾಯವಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ವಾಹನ ಚಾಲಕರ ಒತ್ತಾಯಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಇಂಜಿನಿಯರ್​ಗೆ ಪಂಚಾಯಿತಿ ಮೂಲಕ ಹಾಗೂ ವಿವಿಧ ಸಭೆಗಳಲ್ಲಿ ತಿಳಿಸಿದ್ದೇವೆ. ಅನುದಾನ, ಇತ್ಯಾದಿ ನೆಪ ಹೇಳುವ ಮೂಲಕ ಕಾಮಗಾರಿ ಮಾಡುತ್ತಿಲ್ಲ. ಮೇಲಧಿಕಾರಿಗಳ ಹೆಸರು ಹೇಳುತ್ತ ಮುಂದೂಡುತ್ತಿದ್ದಾರೆ. ಇಂತಹ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾಧಿಕಾರಿಗೆ ಪತ್ರ ಮೂಲಕ ತಿಳಿಸಲಾಗುವುದು. | ಬಸವರಾಜ ಬನ್ನಿಹಟ್ಟಿ, ಗ್ರಾಪಂ ಸದಸ್ಯ ಮಾಸಣಗಿ ಬಳಿ ಹಳ್ಳದ ಮೇಲಿನ ರಸ್ತೆಯಲ್ಲಿ ಹಿಂದಿನ ವರ್ಷ ತಾತ್ಕಾಲಿಕ ಕಾಮಗಾರಿ ಕೈಗೊಳ್ಳಲಾಗಿದೆ. ಹೊಸದಾಗಿ ಸಿ.ಡಿ. ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾದ ಬಳಿಕ ಕಾಮಗಾರಿ ಆರಂಭವಾಗಲಿದೆ. | ಉಮೇಶ ನಾಯಕ, ಲೋಕೋಪಯೋಗಿ ಇಲಾಖೆ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net