

ಸೂಲಿಬೆಲೆ: ಕರೊನಾ ಲಾಕ್‌ಡೌನ್ ಸಮಯದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು ಕೂಡ ದೇಶದ ಸೈನಿಕರಿಗೆ ಸಮಾನರು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕರೊನಾ ವಾರಿಯರ್ಸ್‌ಗಳಿಗೆ ಬಮುಲ್‌ನಿಂದ ಸನ್ಮಾನಿಸಿ 3 ಸಾವಿರ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡಿದರು.
ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಆಶಾ, ಆರೋಗ್ಯ ಕಾರ್ಯಕರ್ತೆಯರು ಕುಟುಂಬವನ್ನು ಮರೆತು ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾರೆ. ಆದ್ದರಿಂದ ಇವರು ಕೂಡ ಒಂದು ರೀತಿಯಲ್ಲಿ ದೇಶ ಕಾಯುವ ಸೈನಿಕರಿಗೆ ಸಮಾನ. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಬಮುಲ್‌ನಿಂದ ಸೂಲಿಬೆಲೆ ಆರೋಗ್ಯ ಕೇಂದ್ರ ವ್ಯಾಪ್ತಿಯ 47 ಆಶಾ ಕಾರ್ಯಕರ್ತೆಯರು, 15 ಆರೋಗ್ಯ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ಪ್ರೋತ್ಸಾಹ ಧನದ ಚೆಕ್ ವಿತರಣೆ ಮಾಡಲಾಗುತ್ತಿದೆ ಎಂದರು.
ಬಮುಲ್ ನಿರ್ದೇಶಕ ಸಿ.ಮಂಜುನಾಥ್ ಮಾತನಾಡಿ, ಹಿಂದಿನ ಕಾಲದಲ್ಲಿ ಕಾಲರಾ, ಪ್ಲೇಗ್ ರೀತಿಯಲ್ಲಿ ಕರೊನಾ ಬಂದಿದೆ. ಇವುಗಳ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದೇ ಪ್ರಥಮ ಆದ್ಯತೆಯಾಗಿದೆ ಎಂದರು.
ಕರೊನಾ ವಾರಿಯರ್ಸ್‌ಗಳಾಗಿ ಪ್ರಾಣದ ಹಂಗು ತೊರೆದು ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಅವರು ಆರೋಗ್ಯ ತಪಾಸಣೆಗೆ ಬಂದಾಗ ಶಾಂತಿ ಸಾಮರಸ್ಯದಿಂದ ವರ್ತನೆ ಮಾಡಿ ತಪಾಸಣೆಗೆ ಸಹಕಾರ ನೀಡಿ. ಅವರು ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎನ್.ಗೋಪಲಗೌಡ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶ್‌ಗೌಡ, ವ್ಯವಸ್ಥಾಪಕ ಶ್ರೀನಿವಾಸಮೂರ್ತಿ, ತಾಪಂ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಶಕುಂತಲಾ ನಾಗರಾಜ್, ಹೊಸಕೋಟೆ ಡೇರಿ ಶಿಬಿರದ ಉಪ ವ್ಯವಸ್ಥಾಪಕ ಡಾ.ಶಿವಾಜಿ ನಾಯಕ್, ಹಿರಿಯ ವಿಸ್ತರಣಾಧಿಕಾರಿ ಇ.ಚಂದ್ರಶೇಖರ್ ಇದ್ದರು.
ಹೂವು ಬೆಳೆಗಾರರಿಗೆ ಪರಿಹಾರ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸುತ್ತಿದ್ದ ಹೂವು ಬೆಳೆಗಾರರಿಗೆ ಸರ್ಕಾರ ರಾಜ್ಯದಲ್ಲಿ ಘೋಷಣೆ ಮಾಡಿರುವ 11 ಸಾವಿರ ಹೆಕ್ಟೇರ್ ಪ್ರದೇಶದ ಪರಿಹಾರದಲ್ಲಿ ಗ್ರಾಮಾಂತರ ಜಿಲ್ಲೆಗೆ 2 ಸಾವಿರ ಹೆಕ್ಟೇರ್ ಪ್ರದೇಶ ಒಳಗೊಂಡಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
1100 ಹೆಕ್ಟೇರ್ ಹೊಸಕೋಟೆ ತಾಲೂಕಿಗೆ ಪರಿಹಾರ ಧಕ್ಕಿದ್ದು, ಸರ್ಕಾರ ಹೆಕ್ಟೇರ್‌ಗೆ 25 ಸಾವಿರ ಪರಿಹಾರ ಘೋಷಣೆ ಮಾಡಿದ್ದು, ಮುಂದಿನ ವಾರದಲ್ಲಿ ಹೋಬಳಿವಾರು ಹಂಚಿಕೆ ಆಗಲಿದೆ ಎಂದು ತಿಳಿಸಿದರು.