

ಮದ್ದೂರು : ರಜೆಗೆ ಗ್ರಾಮಕ್ಕೆ ಬಂದಿದ್ದ ಸೈನಿಕರೊಬ್ಬರು ತಮ್ಮ ನಿವಾಸದ ಮಹಡಿಯ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ತೀವ್ರ ಪೆಟ್ಟಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ಕೆಂಪಯ್ಯ ಅವರ ಪುತ್ರ ಸಿ.ಕೆ.ಸಂದೀಪ್‌ಕುಮಾರ್(38) ಮೃತ ಯೋಧ. ಹರಿಯಾಣದ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು ಕಳೆದ ಒಂದು ವಾರದ ಹಿಂದೆ ರಜೆ ಮೇರೆಗೆ ಗ್ರಾಮಕ್ಕೆ ಬಂದಿದ್ದರೆನ್ನಲಾಗಿದೆ. ಬುಧವಾರ ತಡರಾತ್ರಿ ತಮ್ಮ ಮನೆಯ ಮೆಟ್ಟಿಲಿನಿಂದ ಜಾರಿಬಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಅವರನ್ನು ಚಿಕಿತ್ಸೆಗಾಗಿ ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರಿದ್ದು, ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌರವ ಸಮರ್ಪಣೆ: ಮೃತ ಯೋಧ ಸಂದೀಪ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಮತ್ತು ಸಿಬ್ಬಂದಿ ತಾಲೂಕು ಆಡಳಿತ ವತಿಯಿಂದ ಗೌರವ ಸಮರ್ಪಿಸಿದರು. ಮದ್ದೂರು ವೃತ್ತ ನಿರೀಕ್ಷಕ ಶಿವಕುಮಾರ್ ನೇತೃತ್ವದಲ್ಲಿ ಪೊಲೀಸ್ ಗೌರವ ವಂದನೆ ಸಲ್ಲಿಸಿದ ಬಳಿಕ ನೆರೆದಿದ್ದ ಬಂಧುಗಳು, ಕುಟುಂಬಸ್ಥರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಚಾಮನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.