

ಆರ್.ಕೃಷ್ಣ ಮೈಸೂರು
ಮೈಸೂರು: ನಗರದಲ್ಲಿ ತಲೆ ಎತ್ತಲಿರುವ ಯುದ್ಧ ಸ್ಮಾರಕ ನಿರ್ಮಾಣ ಕಾಮಗಾರಿ ಎರಡು ವರ್ಷ ಕಳೆದರೂ ಇನ್ನೂ ಕುಂಟುತ್ತಾ ಸಾಗಿದೆ. ಕಾರ್ಗಿಲ್ ವಿಜಯೋತ್ಸವದ ದಿನ ಜುಲೈ 26ರಂದು ಉದ್ಘಾಟನೆಗೆ ಸಿದ್ಧಗೊಳ್ಳಬೇಕಾಗಿದ್ದ ಸ್ಮಾರಕ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ 1.47 ಕೋಟಿ ರೂ. ವೆಚ್ಚದಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿ ಎರಡು ವರ್ಷಗಳಾಗಿವೆ. ಆದರೆ, ಇದನ್ನೂ ಪೂರ್ಣಗೊಳಿಸುವ ಇಚ್ಛಾಸಕ್ತಿ ಅಧಿಕಾರಿಗಳಿಗಿಲ್ಲ. ಲೋಕೋಪಯೋಗಿ ಇಲಾಖೆ ಕಾಮಗಾರಿ ನಡೆಸುತ್ತಿದ್ದು, ಸ್ಮಾರಕದ ವೇದಿಕೆಗೆ ಕಂಬಗಳನ್ನು ಜೋಡಿಸುವ ಕಾರ್ಯ ಪೂರ್ಣಗೊಳ್ಳಬೇಕಿದೆ. ಆದರೆ, ಈಗ ಯೋಜನಾ ವೆಚ್ಚ ನಿಗದಿಗಿಂತ ಹೆಚ್ಚಾಗಲಿದೆ. ಪರಿಷ್ಕೃತ ಯೋಜನಾ ವೆಚ್ಚವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿಲ್ಲ. ಇದರಿಂದ ಕಾಮಗಾರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆಯು ಪಾರಂಪರಿಕ ಶೈಲಿಯಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಕಾಮಗಾರಿ ನಡೆಸಿದೆ. 2023ರ ಜುಲೈ 26ರ ಕಾರ್ಗಿಲ್ ವಿಜಯ ದಿನದಂದೇ ಕಾಮಗಾರಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಮತ್ತೊಂದು ವರ್ಷ ಉರುಳಿದರೂ ಯೋಜನೆಯು ಅದೇ ಸ್ಥಿತಿಯಲ್ಲಿ ನಿಂತಿರುವುದು ವಿಪರ್ಯಾಸ.
ಯುದ್ಧ ಸ್ಮಾರಕ ನಿರ್ಮಾಣ ಮಾಜಿ ಯೋಧರ ದಶಕದ ಕನಸಾಗಿದ್ದು, 24 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿದ್ದರು. ಯುದ್ಧ ಸ್ಮಾರಕ ಪೂರ್ಣಗೊಂಡರೆ ನಗರದ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.
ಹೇಗಿರಲಿದೆ ಯುದ್ಧ ಸ್ಮಾರಕ?
ಪಾರಂಪರಿಕ ಶೈಲಿಯಲ್ಲಿಯೇ ಸ್ಮಾರಕ ನಿರ್ಮಾಣವಾಗಲಿದ್ದು, ಚೌಕಾಕಾರದಲ್ಲಿ ನಿರ್ಮಿಸಲಾಗುತ್ತದೆ. ಒಂದು ಭಾಗದಲ್ಲಿ ಮೂರು ವಿಧದ ಸೈನ್ಯದ ಸಂಕೇತದೊಂದಿಗೆ ದ್ವಾರ ನಿರ್ಮಿಸಲಾಗುತ್ತದೆ. ಉಳಿದ ಮೂರು ಬದಿಯಲ್ಲಿ ಭೂಸೇನೆ, ವಾಯು ಸೇನೆ, ನೌಕಾದಳದ ಮಹತ್ವ ಸಾರುವ ಯುದ್ಧ ಟ್ಯಾಂಕರ್‌ಗಳು, ಯುದ್ಧ ವಿಮಾನಗಳು, ನೌಕೆ, ರೈಫಲ್ ಸೇರಿದಂತೆ ಯುದ್ಧದಲ್ಲಿ ಬಳಸುವ ಪರಿಕರಗಳನ್ನು ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ ರಕ್ಷಣಾ ಇಲಾಖೆಗೆ ಪತ್ರ ಬರೆದು ಟ್ಯಾಂಕರ್, ರೈಫಲ್ ಸೇರಿದಂತೆ ಇನ್ನಿತರ ಪರಿಕರಗಳನ್ನು ತರಲು ಪ್ರಯತ್ನಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಪ್ರತಿಕ್ರಿಯೆ ಬಂದಿದ್ದು, ಸಾಮಗ್ರಿಗಳ ಸಾಗಣೆ ವೆಚ್ಚವನ್ನು ಇಲಾಖೆ ಭರಿಸಬೇಕಿದೆ.
ಯುದ್ಧ ಸ್ಮಾರಕವು 4 ಚದರ ಅಡಿ ವಿಸ್ತೀರ್ಣವಿದ್ದು ಒಟ್ಟು 48 ಅಡಿ ಎತ್ತರ ಬರಲಿದೆ. 33 ಅಡಿ ಎತ್ತರ ಸ್ತಂಭ ರಾಷ್ಟ್ರ ಲಾಂಛನ ಇರಲಿದೆ. 10 ಅಡಿ ಅಡಿಪಾಯ ಇರುತ್ತದೆ. ಕಲ್ಲಿನ ಮೇಲೆ 5 ಅಡಿ ಎತ್ತರದ ಅಶೋಕ ಲಾಂಛನ ಅಳವಡಿಸಲಾಗುತ್ತದೆ. ದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿರುವ ಸಾರನಾಥ ಅಶೋಕ್ ಲಾಂಛನವನ್ನು ಮೈಸೂರಿನ ಯುದ್ಧ ಸ್ಮಾರಕದಲ್ಲಿ ಅಳವಡಿಸಲಾಗುತ್ತದೆ.
ಸ್ಮಾರಕಕ್ಕೆ ಬಳಸುವ ಕಲ್ಲಿಗೆ ಪಾಲಿಶ್ ಮಾಡಿದ ನಂತರ ಅಮೆರಿಕನ್ ವೈಟ್ ಪೇಯಿಂಟ್‌ನಿಂದ ಅಕ್ಷರ ಬರೆಯುವುದರಿಂದ ಅಕ್ಷರ ಮಾಸುವುದಿಲ್ಲ. ಪಾಲಿಶ್ ಮಾಡಿದ ನಂತರ ಜೆಟ್ ಬ್ಲಾೃಕ್ ಕಲರ್ ಆಗುತ್ತದೆ.
ದಾನಿಗಳಿಂದ ಸಹಾಯಹಸ್ತ:
ಸ್ಮಾರಕ ನಿರ್ಮಾಣಕ್ಕೆ ಚಾಮರಾಜನಗರದ ಅಮಚವಾಡಿಯ ಪಟೇಲ್ ಪುಟ್ಟಮಾದಯ್ಯ ಅವರು ಸುಮಾರು ಒಂದು ಕೋಟಿ ರೂ. ಮೌಲ್ಯದ ಕಪ್ಪು ಶಿಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀನಾಥ್ ಅವರು 200 ಟನ್‌ನಷ್ಟು ಕಲ್ಲುಗಳನ್ನು ನೀಡಿದ್ದಾರೆ. ಹಾಸನದ ದಾನಿಯೊಬ್ಬರು 25 ಲಕ್ಷ ರೂ. ಮೌಲ್ಯದ ಹಾಸನದ ಹಸಿರು ಗ್ರಾನೈಟ್ ಕಲ್ಲುಗಳನ್ನು ನೀಡಿದ್ದಾರೆ. ಈ ಕಲ್ಲುಗಳ ಮೌಲ್ಯ ಅಂದಾಜು 1.5 ಕೋಟಿ ರೂ.ಗೂ ಹೆಚ್ಚು ಎನ್ನಲಾಗಿದೆ.
ಲೋಕೋಪಯೋಗಿ ಇಲಾಖೆಯು ಮುಂದಿನ ಹಂತದ ಕಾಮಗಾರಿಗೆ 91 ಲಕ್ಷ ರೂ. ಬಿಡುಗಡೆಗೊಳಿಸಲು ಪ್ರಸ್ತಾವ ಕಳುಹಿಸುವುದು ಬಾಕಿ ಇದೆ. ಜತೆಗೆ ಉದ್ಯಾನ ಅಭಿವೃದ್ಧಿಗೆ ಮುಡಾ ಹಾಗೂ ನಗರಪಾಲಿಕೆ ನೆರವು ಪಡೆಯಲು ಯೋಜಿಸಲಾಗಿದೆ.
ಆರೂವರೆ ವರ್ಷದ ಹಿಂದೆ ಸ್ಮಾರಕ ನಿರ್ಮಾಣಕ್ಕಾಗಿ 55 ಲಕ್ಷ ರೂ. ಬಿಡುಗಡೆಯಾಗಿತ್ತು. ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿದೆ. ಅಡಿಪಾಯ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಕಂಬಳಿಗೆ ಹೊಳಪು ನೀಡುವ ಕಾರ್ಯ ನಡೆಯುತ್ತಿದೆ. ಈ ಕಾರ್ಯ 2 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರವಷ್ಟೇ ಅಂತಿಮ ಹಂತದ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ.
ಎಂ.ಡಿ.ಸುದರ್ಶನ್
ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ