ವಕ್ಫ್‌ಬೋರ್ಡ್ ಕಾಯ್ದೆ ತಿದ್ದುಪಡಿಯಾಗಲಿ

MUTALICK
ಪ್ರಮೋದ ಮುತಾಲಿಕ್
Published on

ಲಿಂಗಸುಗೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದಕ್ಕೆ ಎಲ್ಲರೂ ಬೆಂಬಲಿಸಿದರೆ ಮಾತ್ರ ಅತಿಕ್ರಮಣಕ್ಕೆ ಕಡಿವಾಣ ಬೀಳಲಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.

ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಜಮೀನುಗಳ ಪಹಣಿಗಳಲ್ಲಿ ವಕ್ಫ್ ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ನಮ್ಮ ಬುಡಕ್ಕೆ ಬರಲಿದೆ. ಎಲ್ಲಿಯವರೆಗೆ ನರೇಂದ್ರ ಮೋದಿ ಅವರು ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರುವುದಿಲ್ಲವೋ ಅಲ್ಲಿಯವರೆಗೆ ತೂಗುಕತ್ತಿ ನೇತಾಡುತ್ತಿರುತ್ತದೆ. ನಾವೆಲ್ಲರೂ ಕಾಯ್ದೆ ತಿದ್ದುಪಡಿಗೆ ಬೆಂಬಲ ವ್ಯಕ್ತಪಡಿಸಿದರೆ ವಕ್ಫ್ ಬೋರ್ಡ್ ಆಟ ನಿಲ್ಲಲಿದೆ ಎಂದು ಹೇಳಿದರು.

ಕಾಯ್ದೆ ಮೂಲಕ ಸರ್ಕಾರ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ದಾಖಲೆಗಳಲ್ಲಿ ವಕ್ಫ್ ಬೋರ್ಡ್ ನಮೂದು ವಾಪಸ್ ಪಡೆಯುವುದಾಗಿ ಸಿಎಂ ಹೇಳಿದರೂ ಪಹಣಿಗಳಲ್ಲಿ ಬೋರ್ಡ್ ಹೆಸರು ಬರುತ್ತಿರುವುದು ನೋಡಿದರೆ ಸಿದ್ದರಾಮಯ್ಯ ಅವರ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಿಲ್ಲವೋ ಅಥವಾ ಸಿಎಂ ಹೇಳಿಕೆ ನಾಟಕೀಯವೋ ಎಂಬ ಅನುಮಾನ ಮೂಡಿದೆ. ರೈತರು ನ್ಯಾಯಾಲಯದ ಮೊರೆ ಹೋಗಿ ಹಣ ವ್ಯಯಿಸದೆ ತಹಸೀಲ್ದಾರ್ ಬಳಿ ತೆರಳಿ ಯಾವ ಆಧಾರದ ಮೇಲೆ ವಕ್ಫ್ ಬೋರ್ಡ್ ನಮೂದಾಗಿದೆ ಎಂದು ಪ್ರಶ್ನಿಸಿ ಪರಿಹರಿಸಿಕೊಳ್ಳಬೇಕು ಎಂದರು.

ರೈತರಷ್ಟೇ ಅಲ್ಲದೆ ಮಂದಿರ, ಮಠಮಾನ್ಯಗಳು, ಗರಡಿ ಮನೆಗಳು, ಸ್ಲಂ ಬೋರ್ಡ್‌ಗಳು, ಸರ್ಕಾರಿ ಆಸ್ಪತ್ರೆ, ಎಸ್ಪಿ, ಡಿಸಿ ಕಚೇರಿಗಳು ವಕ್ಫ್ ಬೋರ್ಡ್ ಎಂದು ನಮೂದಾಗಿದೆ. ಮುಂದೆ ವಿಧಾನಸೌಧ ಕೂಡ ವಕ್ಫ್ ಬೋರ್ಡ್‌ನದು ಎನ್ನುವ ಕಾಲ ದೂರವಿಲ್ಲ. ಎಲ್ಲ ಮಠಾಧೀಶರು, ಅರ್ಚಕರು, ಧರ್ಮದರ್ಶಿಗಳು, ರೈತರು, ಸಾರ್ವಜನಿಕರು ಒಟ್ಟಾಗಿ ಧ್ವನಿ ಎತ್ತಬೇಕು. ಇದಕ್ಕೆ ಶ್ರೀರಾಮ ಸೇನೆ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು.

ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಾಣೇಶ ಜೋಷಿ, ಪ್ರಮುಖರಾದ ಅನಂತದಾಸ, ಕಿಶೋರ್ ಮುತಾಲಿಕ, ರಮೇಶ, ಶ್ರೀರಾಮ ಸೇನೆ ರಾಜ್ಯ ಸಮಿತಿ ಸದಸ್ಯ ರಾಜೇಶ, ಜಿಲ್ಲಾ ಸಂಚಾಲಕ ರಾಜಚಂದ್ರ ರಮಣಗೌಡ, ತಾಲೂಕು ಅಧ್ಯಕ್ಷ ರಘುಗೌಡ ನಾಯಕ, ವಿಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net