

ಉತ್ತಮ ಪ್ರದರ್ಶನ ನೀಡಿದ ನಗರದ ಜಿಎಸ್‌ಎಸ್‌ಎಸ್ ಮಹಿಳಾ ಇಂಜಿನಿಯರಿಂಗ್ ಕಾಲೇಜು ತಂಡವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ ಬೇಸ್‌ಬಾಲ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ವತಿಯಿಂದ ಮೈಸೂರು ವಿವಿಯ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯಾವಳಿಯ ಮಹಿಳಾ ವಿಭಾಗದ ಮೊದಲ ಪಂದ್ಯದಲ್ಲಿ ಮಂಡ್ಯದ ಪಿಇಎಸ್ ತಂಡವನ್ನು 12-11 ರನ್‌ಗಳಿಂದ ಸೋಲಿಸಿತು.
ಮಹಿಳಾ ವಿಭಾಗದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರಿನ ಆರ್‌ಎನ್‌ಎಸ್‌ಐಟಿ ತಂಡವು ಮೈಸೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ವಿರುದ್ಧ ಜಯ ಸಾಧಿಸಿತು. ಪಂದ್ಯದಲ್ಲಿ ಎರಡು ತಂಡಗಳು ತಲಾ 9 ರನ್ ಗಳಿಸಿ ಸಮಬಲ ಸಾಧಿಸಿದ್ದವು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಆರ್‌ಎನ್‌ಎಸ್‌ಐಟಿ ತಂಡಕ್ಕೆ ಗೆಲುವು ಘೋಷಿಸಲಾಯಿತು.
ಮೈಸೂರು ತಂಡಕ್ಕೆ ಜಯ: ಪುರುಷರ ವಿಭಾಗದಲ್ಲಿ ಮೈಸೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ತಂಡವು ಶುಭಾರಂಭ ಮಾಡಿತು. ಬೆಂಗಳೂರಿನ ಬಿಎಂಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ತಂಡದ ವಿರುದ್ಧ 15-6 ರನ್‌ಗಳಿಂದ ಜಯ ದಾಖಲಿಸಿತು. ಮತ್ತೊಂದು ಪಂದ್ಯದಲ್ಲಿ ಮಂಡ್ಯದ ಪಿಇಎಸ್ ತಂಡವು 4-3 ರನ್‌ಗಳಿಂದ ಚಿತ್ರದುರ್ಗದ ಎಸ್‌ಜೆಎಂಐಟಿ ವಿರುದ್ಧ ರೋಚಕ ಗೆಲುವು ಪಡೆಯಿತು.
ಉದ್ಘಾಟನೆ: ಇದಕ್ಕೂ ಮುನ್ನ ಪಂದ್ಯಾವಳಿಗೆ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ ಸದಸ್ಯ ಡಾ.ಎನ್.ಕೃಷ್ಣೇಗೌಡ ಚಾಲನೆ ನೀಡಿದರು.
ಡಾ.ಸಿ.ವೆಂಕಟೇಶ್ ಮಾತನಾಡಿ, ಕಠಿಣ ಪರಿಶ್ರಮದೊಂದಿಗೆ ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಆದ್ದರಿಂದ ಯಾವುದೇ ಕ್ರೀಡಾಕೂಟಗಳಲ್ಲಿ ಭಾಗಿಯಾಗುವ ಮುನ್ನ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ವಿವಿಯ ಮೈಸೂರು ಪ್ರಾದೇಶಿಕ ನಿರ್ದೇಶಕ ಡಾ.ಟಿ.ಪಿ.ರೇಣುಕಮೂರ್ತಿ, ಡಾ.ಎಂ.ಪಿ.ಮುರಳಿಧರ್, ಡಾ.ಪಿ.ಪುಟ್ಟಸ್ವಾಮಿಗೌಡ, ಡಾ.ಕೆ.ಎಂ.ಚಿರಂತ್, ಜಿ.ಎಲ್.ರುಘುನಾಥ ಇತರರಿದ್ದರು.