ಋಷಿಗಳ ದೃಷ್ಟಿ ಸೂಕ್ಷ್ಮ, ಸಮಗ್ರ, ಸೋಂದಾ ಸ್ವರ್ಣವಲ್ಲೀ ಶ್ರೀ ಆಶೀರ್ವಚನ

25sirsi5- swarnavalli shree
Published on

ಶಿರಸಿ: ಋಷಿಗಳ ದೃಷ್ಟಿ ಸೂಕ್ಷ್ಮ ಮತ್ತು ಸಮಗ್ರ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.
ತಮ್ಮ 34ನೇ ಹಾಗೂ ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ವಸ್ಯ ಸಂದರ್ಭದಲ್ಲಿ ಶ್ರೀಮಠದ ಪಾರಂಪರಿಕ ಶಿಷ್ಯರಾದ ಬನವಾಸಿ, ಬದನಗೋಡು, ತವನಂದಿ ಸೀಮೆಯ ಸಮಸ್ತ ಭಕ್ತರಿಂದ ಭಿಕ್ಷಾ ಹಾಗೂ ಪಾದಪೂಜೆ ಸೇವೆ ಸ್ವೀಕರಿಸಿ ಗುರುವಾರ ಅವರು ಮಾತನಾಡಿದರು.
ಋಷಿಗಳು ಗಮನಿಸಿರುವ ಪ್ರತಿ ವಿಷಯಗಳಲ್ಲಿ ಸೂಕ್ಷ್ಮ ಹಾಗೂ ಸಮಗ್ರತೆ ಕಾಣಬಹುದು. ಅವರ ದೃಷ್ಟಿ ಆಮೂಲಾಗ್ರವಾಗಿ ಹಾಗೂ ತಳರ್ಸ³ಯಾಗಿ ಇರುವುದು ಕಂಡುಬರುತ್ತದೆ. ಅವರು ಬರೆದ ಎಲ್ಲಾ ಗ್ರಂಥಗಳಲ್ಲೂ ಅವರ ದೂರದೃಷ್ಟಿತ್ವ ನೋಡಬಹುದು. ಯಾವುದೇ ಶಾಸ್ತ್ರ, ವೇದಾಂತ, ಯೋಗ, ಆಯುರ್ವೆದ, ಪಾಕಶಾಸ್ತ್ರ ಇವೆಲ್ಲದರಲ್ಲೂ ಅವರು ಗಮನ ಹರಿಸಿರುವುದನ್ನು ಕಂಡುಕೊಳ್ಳಬಹುದು ಎಂದರು.
ಋಷಿಗಳ ದೃಷ್ಟಿ ಎಷ್ಟು ಆಳವಾಗಿ ಇತ್ತು ಎಂಬುದನ್ನು ಉದಾಹರಣೆ ಸಹಿತ ನುಡಿದ ಶ್ರೀಗಳು, ಲೋಕದಲ್ಲಿ ಎಷ್ಟು ಯಜ್ಞ - ಯಾಗಗಳನ್ನು ಮಾಡುತ್ತಾರೋ ಅದರಿಂದಲೇ ಎಲ್ಲವೂ ಆಗುವಂತದ್ದು. ಅದೇ ಎಲ್ಲದಕ್ಕೂ ಕಾರಣ. ದೇವತೆಗಳು ಮಳೆ - ಬೆಳೆಗಳನ್ನು ಕೊಡುವುದು ಇಲ್ಲಿ ನಡೆಯುವ ಕರ್ಮಗಳನ್ನು ನೋಡಿಕೊಂಡು ಎಂದರು.
ಸೀಮೆಯ ಮಾತೆಯರು ಮತ್ತು ಮಹನೀಯರು ಶ್ರದ್ಧಾ ಭಕ್ತಿಯಿಂದ ಸೇವೆ ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆ ಮಾಡಿದರು. ಮಹನೀಯರು ಗಾಯತ್ರಿ ಅನುಷ್ಠಾನ ಕೈಗೊಂಡರು. ಸೀಮೆಯ ಪ್ರಮುಖರಾದ ಅನಂತ ಭಟ್ ಬೆಂಗಳೆ, ಶ್ರೀಪಾದ್ ರಾಯ್ಸದ್, ಶ್ರೀಪಾದ್ ಹೆಗಡೆ ಬಸೂರು ಇದ್ದರು.
ಆರ್.ಎಸ್. ಹೆಗಡೆ ಭೈರುಂಬೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net